ಶನಿವಾರ, ಜುಲೈ 2, 2022
25 °C
ಸಿದ್ದು ಹಲಸು ಪ್ರಮುಖ ಆಕರ್ಷಣೆ: ಹಲಸಿನ ಉಪ ಉತ್ಪನ್ನಗಳು, ಕಸಿ ಗಿಡಗಳು ಮಾರಾಟಕ್ಕೆ ಲಭ್ಯ

ಹಿರಿಯಡಕದಲ್ಲಿ ಹಲಸು ಮೇಳ 28ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮೇ 28 ಹಾಗೂ 29ರಂದು ಹಿರಿಯಡಕದ ಮಹತೋಭಾರ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಲಸಿನ ಮೇಳ ಆಯೋಜಿಸಲಾಗಿದೆ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲಸಿನ ಮೇಳ ನಡೆಯುತ್ತಿದೆ.

28ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಮೇಳ ಉದ್ಘಾಟಿಸಲಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಲಾಲಾಜಿ ಮೆಂಡನ್ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ರೈತರನ್ನು ಸನ್ಮಾನಿಸಲಿದ್ದಾರೆ. ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 12ಕ್ಕೆ ಪ್ರಾಧ್ಯಾಪಕ ಡಾ.ಜಿ.ಎಸ್‌.ಕೆ.ಸ್ವಾಮಿ ಹಾಗೂ ಸಖರಾಯಪಟ್ಟಣದ ಶಿವಣ್ಣ ಹಲಸು ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಲಿದ್ದಾರೆ. 2 ಗಂಟೆಗೆ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿಯ ಪ್ರಸನ್ನಾ ಭಟ್ ತಂಡ ಹಲಸಿನ ಖಾದ್ಯಗಳ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

29ರಂದು ಬೆಳಿಗ್ಗೆ 10.30ರಿಂದ 1.30ರವರೆಗೆ ಖ್ಯಾತ ಲೇಖಕ ಶ್ರೀಪಡ್ರೆ ಹಲಸು ಬೆಳೆಯ ಪರಿಚಯ ಹಾಗೂ ತಾಂತ್ರಿಕತೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ.ವೈ.ಕಾಂತರಾಜ್ ಹಾಗೂ ಮನಿಷ್ ಮಲ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಲಿಸದ್ದಾರೆ. ಮಧ್ಯಾಹ್ನ 2ಕ್ಕೆ ಹಲಸಿನ ಖಾದ್ಯಗಳ ತಯಾರಿಕೆ ಕುರಿತು ಸುಮಾ ರಂಗಪ್ಪ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಸಾರ್ವಜನಿಕರು ಮೇಳದಲ್ಲಿ ಹಲಸಿನ ಹಣ್ಣಿನ ಸವಿ ಸವಿಯುದರ ಜತೆಗೆ, ಹಲಸಿನ ಮೌಲ್ಯವರ್ಧನೆ, ಕೃಷಿ, ತಂತ್ರಜ್ಞಾನ ಬಳಕೆಯ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಲಕ್ಷ್ಮಣ್ ಹೇಳಿದರು.

ಹೊರ ಜಿಲ್ಲೆಗಳ ಹಲಸು ಮಾರಾಟಕ್ಕೆ ಲಭ್ಯ

ಉಡುಪಿ ಸುತ್ತಮುತ್ತಲಿನ ಹಾಗೂ ಹೊರ ಜಿಲ್ಲೆಗಳ ಹಲಸು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದು, 20 ಟನ್ ಹಲಸು ಬರುವ ನಿರೀಕ್ಷೆ ಇದೆ. ತುಮಕೂರಿನ ಸಿದ್ದು ಹಲಸು ಮೇಳದ ಪ್ರಮುಖ ಆಕರ್ಷಣೆಯಾಗಿರಲಿದ್ದು, ಕಸಿ ಗಿಡಗಳು ಮಾರಾಟಕ್ಕೆ ಲಭ್ಯವಿದೆ. ತುಮಕೂರಿನ ನಂದು, ನಾಗು ಹಲಸು, ಚಂದ್ರ ಬಕ್ಕೆ, ರುದ್ರಾಕ್ಷಿ ಹಲಸು ಕೂಡ ಇರಲಿವೆ. ಅತ್ಯುತ್ತಮ ರುಚಿ ಹೊಂದಿರುವ ಹಲಸಿಗೆ ಬಹುಮಾನ ನೀಡಲಾಗುವುದು ಎಂದು ಬ್ರಹ್ಮಾವರ ಕೆವಿಕೆ ಹಿರಿಯ ವಿಜ್ಞಾನಿ ಡಾ.ಧನಂಜಯ್ ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.