ಗುರುವಾರ , ಮೇ 6, 2021
24 °C

ಆರೋಗ್ಯ ಇಲಾಖೆಯಲ್ಲಿ ಪ್ರತಿ ಬುಧವಾರ ‘ಇನ್‌ಸ್ಪೆಕ್ಷನ್ ಡೇ’ ನಡೆಯಲಿದೆ: ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಆರೋಗ್ಯ ಇಲಾಖೆಯಲ್ಲಿ ಪ್ರತಿ ಬುಧವಾರ ‘ಇನ್‌ಸ್ಪೆಕ್ಷನ್ ಡೇ’ ನಡೆಯಲಿದ್ದು, ಸಚಿವರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರವರೆಗೂ ಅವರವರ ಕಾರ್ಯಕ್ಷೇತ್ರ ವ್ಯಾಪ್ತಿಯ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಸರಿಪಡಿಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ಗುಣಮಟ್ಟ ಸುಧಾರಣೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸಲು ‘ಇನ್‌ಸ್ಪೆಕ್ಷನ್ ಡೇ’ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಮುಂದಿನ ವಾರದಿಂದಲೇ ಜಾರಿಗೆ ಬರಲಿದೆ. ಜತೆಗೆ, ಪ್ರತಿದಿನದ ಇಲಾಖಾ ಕಾರ್ಯ ಚಟುವಟಿಕೆಗಳ ಕುರಿತು ಅಧಿಕಾರಿಗಳು ಡೈರಿಯಲ್ಲಿ ನಮೂದಿಸಬೇಕು. ವೇತನ, ಭತ್ಯೆ ಹೆಚ್ಚಳ ಹಾಗೂ ಬಡ್ತಿ ನೀಡುವಾಗ ಡೈರಿಯ ಅಂಶಗಳನ್ನು ಪರಿಗಣಿಸಲಾಗುವುದು ಎಂದರು.

ರಾಜ್ಯದಲ್ಲಿ 2,000ಕ್ಕೂ ಹೆಚ್ಚು ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ಅಥವಾ ಒಂದೂವರೆ ತಿಂಗಳಲ್ಲಿ ವೈದ್ಯರ ಕೊರತೆ ನೀಗಲಿದೆ. 800 ರಿಂದ 1,000 ಫಾರ್ಮಾಸಿಸ್ಟ್‌, ಲ್ಯಾಬ್ ಟೆಕ್ನಿಷಿಯನ್ಸ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇರ ನೇಮಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ರಾಜ್ಯದಲ್ಲಿ ಆಂಬುಲೆನ್ಸ್‌, ವೈದ್ಯಕೀಯ ಉಪಕರಣಗಳ ಕೊರತೆ ನೀಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐಎಲ್‌ಐ, ಸಾರಿ ಪ್ರಕರಣಗಳನ್ನು ಪತ್ತೆ ಹಚ್ಚಿ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದರು.

ಜಾಲತಾಣ ಬಳಕೆ: ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಯುವಕರು ಸಾಮಾಜಿಕ ಜವಾಬ್ದಾರಿ ಅರಿತು ಮನೆಯಲ್ಲಿರುವ ಹಿರಿಯರನ್ನು ಲಸಿಕಾ ಕೇಂದ್ರಗಳಿಗೆ ಕರೆತರಬೇಕು. ಲಸಿಕೆ ಪಡೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದು ಕರೆ ನೀಡಿದರು.

ಕೋವಿಡ್‌ ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಹಾಗೂ ಲಸಿಕೆ ಪಡೆಯುವಂತೆ ಇತರರಿಗೆ ಪ್ರೇರಣೆ ನೀಡಲು ಯುವಕರು ಹಾಗೂ ಜಾಲತಾಣಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು