ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಭಾರಿ ಮಳೆಗೆ ಕೃತಕ ನೆರೆ

ಬನ್ನಂಜೆಯಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು; ಕಿರಿಮಂಜೇಶ್ವರದಲ್ಲಿ 26.1 ಸೆಂ.ಮೀ ಮಳೆ
Last Updated 18 ಜುಲೈ 2021, 14:40 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಗಿದೆ. ಉಡುಪಿ ನಗರದ ಬನ್ನಂಜೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಮೂಡನಿಡಂಬೂರಿನ ಬ್ರಹ್ಮ ಬೈದರ್ಕಳ ಗರೋಡಿ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಮತ್ತೊಂದೆಡೆ, ಕಾಪು ತಾಲ್ಲೂಕಿನಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಮಜೂರು, ಉಳಿಯಾರು, ಕರಂದಾಡಿ, ಮಲ್ಲಾರಿನಲ್ಲಿ ನೆರೆ ಬಂದಿದ್ದು, ಅಲ್ಲಿ ವಾಸವಾಗಿದ್ದವರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ನೆರೆಗೆ ಸಿಲುಕಿದ್ದ ಅನಾರೋಗ್ಯ ಪೀಡಿತ ಮಹಿಳೆಯೊಬ್ಬರನ್ನು ಸ್ಥಳೀಯರು ಕುರ್ಚಿಯಲ್ಲಿ ಕೂರಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.

ಅತಿ ಹೆಚ್ಚು ಮಳೆ:

ಕುಂದಾಪುರ ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಅತಿ ಹೆಚ್ಚು 27.1, ನಾಡದಲ್ಲಿ 25.6 ಸೆಂ.ಮೀ ಮಳೆ ಸುರಿದಿದೆ. ಜೂನ್ 1ರಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ 166.2 ಸೆಂ.ಮೀ ಮಳೆಯಾಗಿದೆ. 192 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 4 ಮನೆಗಳು ಪೂರ್ಣ ಕುಸಿದಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದ ಉಡುಪಿ ತಾಲ್ಲೂಕಿನ ಕಡೆಕಾರು ಗ್ರಾಮದ ಶೋಭಾ ಅವರ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ. ಆತ್ರಾಡಿ ಗ್ರಾಮದ ಬೇಬಿ ನಾಯ್ಕ್‌ ಅವರ ಮನೆಯ ಗೋಡೆ ಕುಸಿದಿದೆ. ಉದ್ಯಾವರ ಗ್ರಾಮದ ಸುಜಾತ ಮೆಂಡನ್‌ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶ: ಹಾನಿಯಾಗಿದೆ.

ಕಾಪು ತಾಲ್ಲೂಕಿನ ಮೂಡುಬೆಟ್ಟು ಗ್ರಾಮದ ವಾಸು ಆಚಾರ್ಯ ಮನೆ, ಕುರ್ಕಾಲು ಗ್ರಾಮದಲ್ಲಿ ಶೌಚಾಲಯ, ಪಾಂಗಾಳ ಗ್ರಾಮದ ಸುಬ್ಬ ಮೂಲ್ಯರ ಮನೆ, ಬೈಂದೂರು ತಾಲ್ಲೂಕಿನ ಯಡ್ತರೆ, ಹೆರಂಜಾಲು ಗ್ರಾಮದಲ್ಲಿ ಸೀತು ಪೂಜಾರ್ತಿ ಅವರ ಮನೆಗೆ ಹಾನಿಯಾಗಿದೆ.

ಉಡುಪಿ ತಾಲ್ಲೂಕಿನಲ್ಲಿ 10.6, ಕಾಪುವಿನಲ್ಲಿ 11.5, ಬ್ರಹ್ಮಾವರದಲ್ಲಿ 12.1, ಕುಂದಾಪುರದಲ್ಲಿ 12.6, ಬೈಂದೂರಿನಲ್ಲಿ 13, ಕಾರ್ಕಳದಲ್ಲಿ 9, ಹೆಬ್ರಿ ತಾಲ್ಲೂಕಿನಲ್ಲಿ 16.7 ಸೆಂ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 12.2 ಸೆಂ.ಮೀ ಮಳೆಯಾಗಿದೆ.

ಮತ್ತೊಂದೆಡೆ, ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ವಾರಾಂತ್ಯವಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಕರಾವಳಿಗೆ ಬರುತ್ತಿದ್ದು, ಮಲ್ಪೆ ಬೀಚ್‌ಗಿಳಿದು ಮೋಜು ಮಾಡುತ್ತಿದ್ದಾರೆ. ಇದರಿಂದ ಜೀವಕ್ಕೆ ಹಾನಿಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯ ಸ್ವರ್ಣಾ, ವಾರಾಹಿ, ಶಾಂಭವಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಹೆಬ್ರಿ ಬಳಿ ಸೀತಾ ನದಿಯ ನೀರು ಉಡುಪಿ–ಶಿವಮೊಗ್ಗ (ರಾಷ್ಟ್ರೀಯ ಹೆದ್ದಾರಿ 169 ಎ) ರಸ್ತೆಯನ್ನು ಆವರಿಸಿ ವಾಹನಗಳ ಸಂಚಾರ ಬಂದ್ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT