ಹೆಬ್ರಿ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀರಾಮ ಮಂಟಪದಲ್ಲಿ 4 ದಿನ ವಿಜೃಂಭಣೆಯಿಂದ ನಡೆದ 49ನೇ ವರ್ಷದ ಗಣೇಶೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಸಮಿತಿ ಅಧ್ಯಕ್ಷ ಎಚ್. ಜನಾರ್ದನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಮುಂದಿನ ವರ್ಷ ನಡೆಯುವ ಗಣೇಶೋತ್ಸವದ ಸುವರ್ಣ ಸಂಭ್ರಮ, ಅದರ ನೆನಪಿಗಾಗಿ ದೇವರಿಗೆ ಚಿನ್ನ ಲೇಪಿತ ಕಿರೀಟ ಸಮರ್ಪಣೆ, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಸಮಿತಿ ಜನಾರ್ದನ್ ಮನವಿ ಮಾಡಿದರು.
ಶೈಕ್ಷಣಿಕ ಸಾಧನೆ ಮಾಡಿದ ಸಹ ಪ್ರಾಧ್ಯಾಪಕ ವಿದ್ಯಾಧರ ಹೆಗ್ಡೆ, ವಿಶೇಷ ಸೇವೆ ಸಲ್ಲಿಸಿದ ಮೆಸ್ಕಾಂನ ಅಪ್ಪುರಾಜ್, ಎಸ್ಎಸ್‌ಎಲ್‌ಸಿ ಸಾಧಕರಾದ ವರಂಗದ ಅನುಷಾ ನಾಯಕ್, ಮಠದಬೆಟ್ಟಿನ ಶಿಫಾ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಜನರಲ್ ಆಸ್ಪತ್ರೆಯ ಡಾ.ಭಾರ್ಗವಿ ಆರ್. ಐತಾಳ್, ಮೂಡುಬಿದಿರೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ನಿವೃತ್ತ ಉಪನ್ಯಾಸಕ ಶಂಕರ ಮರಾಠೆ ಗಣೇಶೋತ್ಸವದ ಸೇವಾ ಕಾರ್ಯವನ್ನು ಪ್ರಶಂಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಎಚ್. ನಾಗರಾಜ ಜೋಯಿಸ್ ಸಹೋದರರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಾಪೂಜೆ, ವಿಸರ್ಜನಾ ಪೂಜೆ ನಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿಯ ಪ್ರಭಾವಳಿ ಸಹಿತ ಗಣಪತಿ ದೇವರ ಭವ್ಯ ಪುರ ಮೆರವಣಿಗೆ, ವೈಭವದ ಶೋಭಾಯಾತ್ರೆ ನಡೆಯಿತು. ಅಯೋಧ್ಯೆಯ ಶ್ರೀರಾಮ ಮಂದಿರ, ಆನೆ ಸಹಿತ ವಿವಿಧ ಟ್ಯಾಬ್ಲೊಗಳು, ಹುಲಿವೇಷ, ಚೆಂಡೆ ಸಹಿತ ನಾಡಿನ ವಿವಿಧ ಕಲಾ ಪ್ರಕಾರಗಳ ವೇಷಭೂಷಣಗಳು ವಿಶೇಷ ಕಳೆ ನೀಡಿದವು. ಸಾವಿರಾರು ಭಕ್ತರು ಸಂಭ್ರಮಕ್ಕೆ ಸಾಕ್ಷಿಯಾದರು.
ಸಮಿತಿಯ ಸದಸ್ಯರು, ವಿವಿಧ ಸಂಸ್ಥೆಗಳು ಗಣೇಶೋತ್ಸವ ಯಶಸ್ಸಿಗೆ ಸಹಕರಿಸಿದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು, ಗಣ್ಯರು ಇದ್ದರು. ಸಮಿತಿಯ ಕಾರ್ಯದರ್ಶಿ ನರೇಂದ್ರ ನಾಯಕ್ ಸ್ವಾಗತಿಸಿದರು. ಪ್ರಸಾದ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕನ್ಯಾನ ಸಂತೋಷ ನಾಯಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.