ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದೆಬೆಟ್ಟುವಿನಲ್ಲಿ 18 ಕೊರಗ ಕುಟುಂಬಕ್ಕೆ ಸೂರು

ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ದಿಟ್ಟ ನಿರ್ಧಾರ
Last Updated 5 ಫೆಬ್ರುವರಿ 2020, 14:15 IST
ಅಕ್ಷರ ಗಾತ್ರ

ಪಡುಬಿದ್ರಿ: ಪಾದೆಬೆಟ್ಟುವಿನಲ್ಲಿ 18 ಕೊರಗ ಕುಟುಂಬಗಳ ಮನೆ ನಿರ್ಮಾಣ ಕಾರ್ಯವು ಪೂರ್ಣಗೊಂಡು ಮಂಗಳವಾರ ಗೃಹಪ್ರವೇಶದ ವಿಧಿವಿಧಾನಗಳು ನಡೆದವು.

ಕುಟುಂಬಗಳು ಆರು ವರ್ಷಗಳ ಹಿಂದೆ ಸುಜ್ಲಾನ್ ಯೋಜನಾ ಪ್ರದೇಶದ ಜಮೀನಿನಲ್ಲಿ ಗುಡಿಸಿಲು ನಿರ್ಮಿಸಿಕೊಂಡು ಪುಟ್ಟ ಮಕ್ಕಳೊಂದಿಗೆ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದವು. ಇವರ ದಯನೀಯ ಸ್ಥಿತಿಯ ಬದುಕನ್ನು ಕಂಡು ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬೇಡಿಕೆಗೆ ಸ್ಪಂದಿಸಿ ಪಾದೆಬೆಟ್ಟಿನಲ್ಲಿ ಜಮೀನು ಮಂಜೂರು ಮಾಡಿದ್ದರು. ಇದೀಗ ಮನೆ ನಿರ್ಮಾಣದ ಮೂಲಕ ಫಲಾನುಭವಿಗಳಲ್ಲಿ ಸಂತಸ ಮೂಡಿಸಿದೆ.

ಮನೆಯಲ್ಲಿನ ವ್ಯವಸ್ಥೆ: ಹಾಲ್, ಮಲಗುವ, ಅಡುಗೆ, ಊಟದ ಕೋಣೆ, ಬಾತ್‌ ರೂಂ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ಕೊಳವೆ ಬಾವಿ ಕೊರೆದು ಪಂಪ್ ಅಳವಡಿಸಿ ಓವರ್‌ಹೆಡ್ ಟ್ಯಾಂಕ್ ಮೂಲಕ ಪ್ರತೀ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಸಾಗುತ್ತಿದೆ. ಶೀಘ್ರವೇ ಎಲ್ಲ ಮನೆಗಳಿಗೂ ನೀರಿನ ಭಾಗ್ಯ ಸಿಗಲಿದೆ.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು, ಜಿಲ್ಲಾಡಳಿತ ಉಡುಪಿ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ ಬೆಂಗಳೂರು, ಕಾರ್ಮಿಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಫಲಾನುಭವಿಗಳಿಗೆ ಕುಟುಂಬದ 25 ಸದಸ್ಯರು ಸೇರಿದಂತೆ 60 ಮಂದಿ ಮನೆ ನಿರ್ಮಾಣ ಕಾರ್ಯದ ತರಬೇತಿ ಪಡೆದಿದ್ದಾರೆ. ತರಬೇತಿ ಪಡೆದ 60 ಮಂದಿ ನಿರ್ಮಾಣ ಕಾರ್ಯದಲ್ಲಿ ಭಾಗಿ ಆಗಿದ್ದರು.

6 ವರ್ಷಗಳ ಹಿಂದೆ ಸುಜ್ಲಾನ್ ಯೋಜನಾ ಪ್ರದೇಶದ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದ 19 ಕೊರಗ ಕುಟುಂಬಗಳನ್ನುಒಕ್ಕಲೆಬ್ಬಿಸಲು ಸುಜ್ಲಾನ್ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದ ತೀರ್ಪು ಸುಜ್ಲಾನ್ ಪರ ಬಂದಿದ್ದರಿಂದ ಕಂಪನಿ ಜೂನ್ ತಿಂಗಳಿನಲ್ಲಿ ಈ ಕುಟುಂಬ ತೆರವಿಗೆ ಗಡುವು ವಿಧಿಸಿತ್ತು.

ಮನೆ ಕಳೆದುಕೊಂಡ ಕುಟುಂಬಕ್ಕೆ ಸುಜ್ಲಾನ್ ಪುನರ್ವಸತಿ ಕಾಲೋನಿ ಬಳಿ 50 ಸೆಂಟ್ಸ್ ಜಾಗ ಗುರುತಿಸಿ ನೀಡಲಾಗಿತ್ತು. ಆದರೆ, ಅಲ್ಲಿ ವಸತಿ ನಿರ್ಮಾಣ ಮಾಡದಂತೆ ಪುನರ್ವಸತಿ ಕಾಲೋನಿ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ನ್ಯಾಯಾಲಯದವರಿಗೆ ಹೋಗಿ ನವೆಂಬರ್ 2016 ರಲ್ಲಿ ಕೊರಗ ಕುಟುಂಬಕ್ಕೆ ನ್ಯಾಯ ದೊರಕಿತ್ತು. ಆದರೆ ಅಲ್ಲಿ ನಿವೇಶನ ಲಭ್ಯವಾದರೂ ಸುಜ್ಲಾನ್ ಪುನರ್ವಸತಿ ಕಾಲೋನಿ ಕೆಲ ನಿವಾಸಿಗರ ದೌರ್ಜನ್ಯದಿಂದ ಮನೆ ನಿರ್ಮಾಣ ಮಾಡದೇ, ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಲ್ಲಿ ಬೇರೆ ಕಡೆಗೆ ಜಮೀನು ನೀಡುವಂತೆ ಮನವಿ ಮಾಡಿದ್ದರು. ಬೇಡಿಕೆಗೆ ಸ್ಪಂದಿಸಿ ಪಾದೆಬೆಟ್ಟಿನಲ್ಲಿ ಅವರು ಜಮೀನು ಮಂಜೂರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT