ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಮಂಜುಗಡ್ಡೆಗೆ ಬೇಡಿಕೆ ಕುದುರುವ ಕಾಲ

ಮೀನುಗಾರಿಕೆ ಶುರುವಾದಾಗ ಘಟಕಗಳಲ್ಲಿ ಚಟುವಟಿಕೆ ಚುರುಕು: ಎರಡು ತಿಂಗಳು ಸಂಕಷ್ಟ
ನವೀನ್‌ ಕುಮಾರ್‌ ಜಿ.
Published : 12 ಆಗಸ್ಟ್ 2024, 7:59 IST
Last Updated : 12 ಆಗಸ್ಟ್ 2024, 7:59 IST
ಫಾಲೋ ಮಾಡಿ
Comments

ಉಡುಪಿ: ಟ್ರಾಲಿಂಗ್‌ ನಿಷೇಧದ ಅವಧಿ ಮುಗಿದು ಯಾಂತ್ರೀಕೃತ ದೋಣಿಗಳು ಕಡಲಿಗಿಳಿಯುತ್ತಿದ್ದಂತೆ ಮಲ್ಪೆಯಿಂದ ಉಡುಪಿ ನಗರದವರೆಗೆ ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತವೆ.

ಮಳೆಗಾಲದ ಆರಂಭದ 2 ತಿಂಗಳು ಬಾಗಿಲು ಮುಚ್ಚಿದ್ದ ಮಂಜುಗಡ್ಡೆ ಘಟಕಗಳಲ್ಲೂ (ಐಸ್‌ ಪ್ಲಾಂಟ್‌) ಈಗ ಚಟುವಟಿಕೆಗಳು ಚುರುಕುಗೊಂಡಿವೆ. ಮಲ್ಪೆ ಮತ್ತು ಆಸುಪಾಸಿನಲ್ಲಿ 76 ಮಂಜುಗಡ್ಡೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಾಗ ಅವುಗಳಲ್ಲೂ ಕೆಲಸ ಕಾರ್ಯಗಳು ನಿಲ್ಲುತ್ತವೆ. ಅದನ್ನೇ ನಂಬಿರುವ ಹಲವು ಮಂದಿ ಕಾರ್ಮಿಕರು ಈ ಅವಧಿಯಲ್ಲಿ ಪರ್ಯಾಯ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಯಾಂತ್ರೀಕೃತ ದೋಣಿಗಳಲ್ಲಿ ಹಿಡಿಯುವ ಮೀನುಗಳನ್ನು ಕೆಡದಂತೆ ಸಂಗ್ರಹಿಸಿಡಲು ಮಂಜುಗಡ್ಡೆಗಳನ್ನು ಬಳಸಲಾಗುತ್ತದೆ. ಆದ್ದರಿಂದ ಮೀನುಗಾರಿಕೆ ಋತುವಿನಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಮಲ್ಪೆ ಪರಿಸರದ ಮಂಜುಗಡ್ಡೆ ಘಟಕಗಳಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕರ ಕೊರತೆಯೇ ದೊಡ್ಡ ಸವಾಲು ಎನ್ನುತ್ತಾರೆ ಈ ಘಟಕಗಳ ಮಾಲೀಕರು.

ಮೀನುಗಾರಿಕೆ ಚಟುವಟಿಕೆ ಸ್ತಬ್ಧಗೊಳ್ಳುವ 2 ತಿಂಗಳ ಅವಧಿಯಲ್ಲಿ ಈ ಕಾರ್ಮಿಕರು ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಾರೆ. ಇನ್ನೇನು ಆಗಸ್ಟ್‌ ತಿಂಗಳು ಬಂತೆಂದರೆ ಅವರು ಮಲ್ಪೆಗೆ ಮರಳುತ್ತಾರೆ.

ನೀರು ಮಂಜುಗಡ್ಡೆಯಾಗಲು 24 ಗಂಟೆ ಬೇಕು. ಉತ್ಪಾದನೆಯಾದ ಮಂಜುಗಡ್ಡೆಗೆ ಬೇಡಿಕೆ ಇಲ್ಲದಿದ್ದರೆ ಅವು ಕರಗದಂತೆ ಕಾಪಾಡಲು ಹೆಚ್ಚು ವೆಚ್ಚವಾಗುತ್ತದೆ ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಉದಯ್‌ಕುಮಾರ್‌.

ಜಿಲ್ಲೆಯಲ್ಲಿ 96 ಮುಂಜುಗಡ್ಡೆ ಘಟಕಗಳಿವೆ. ಈ ಘಟಕಗಳು ಮೀನುಗಾರಿಕೆಯನ್ನೇ ಅವಲಂಭಿಸಿವೆ. ಮತ್ಸ್ಯಕ್ಷಾಮ ಕಾಣಿಸಿಕೊಂಡಾಗ ಮಂಜುಗಡ್ಡೆಗಳಿಗೂ ಬೇಡಿಕೆ ಕುಸಿಯುತ್ತದೆ. ಆಗ ಘಟಕಗಳನ್ನು ತಾಲ್ಕಾಲಿಕವಾಗಿ ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಅವರು.

ಮಲ್ಪೆ ಪರಿಸರದ ಬಾವಿಗಳ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ ಮಂಜುಗಡ್ಡೆ ಘಟಕಗಳಲ್ಲಿ ಬಳಸುವ ಐಸ್‌ ಕ್ಯಾನ್‌ಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಒಂದು ಘಟಕದ ಐಸ್‌ ಕ್ಯಾನ್‌ಗಳನ್ನು ಬದಲಿಸಬೇಕಾದರೆ ₹15ರಿಂದ ₹20 ಲಕ್ಷ ಬೇಕು ಎಂದು ವಿವರಿಸುತ್ತಾರೆ ಅವರು.

ಇಲ್ಲಿನ ನೀರಿನಲ್ಲಿ ಉಪ್ಪಿನ ಅಂಶ ಜಾಸ್ತಿಯಾದಾಗ ಟ್ಯಾಂಕರ್‌ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದು ಟ್ಯಾಂಕರ್‌ ನೀರಿಗೆ ₹1,200 ಇದೆ. ಆಗ ತಿಂಗಳಿಗೆ ₹2 ಲಕ್ಷದಷ್ಟು ಟ್ಯಾಂಕರ್‌ ನೀರಿಗೆ ಖರ್ಚು ಮಾಡಬೇಕಾಗುತ್ತದೆ ಎಂದೂ ಅವರು ಅಳಲು ತೋಡಿಕೊಳ್ಳುತ್ತಾರೆ.

ಅಂದಾಜು 100 ಕೆ.ಜಿ ಭಾರದ ಮಂಜುಗಡ್ಡೆಯ ಬ್ಲಾಕ್‌ಗಳನ್ನು ಮಾಡಿ, ಅವುಗಳನ್ನು ಯಂತ್ರದ ಮೂಲಕ ಹುಡಿ ಮಾಡಿ ಟೆಂಪೊ, ಲಾರಿಗಳಿಗೆ ತುಂಬಿಸಲಾಗುತ್ತದೆ. ಆ ಲಾರಿಗಳು ದಕ್ಕೆಗೆ ತೆರಳುತ್ತವೆ. ಅಲ್ಲಿ ಮಂಜುಗಡ್ಡೆಯನ್ನು ದೋಣಿಗಳಿಗೆ ತುಂಬಿಸಲಾಗುತ್ತದೆ.

ಮೀನುಗಾರಿಕೆಯ ಬಿಡುವಿನ ಎರಡು ತಿಂಗಳ ಅವಧಿಯಲ್ಲಿ ಮಂಜುಗಡ್ಡೆ ಘಟಕಗಳಲ್ಲಿ ಕೂಡ ನಿರ್ವಹಣಾ ಕೆಲಸಗಳು ನಡೆಯುತ್ತವೆ. ಯಂತ್ರಗಳ ದುರಸ್ತಿ, ಬಿಡಿಭಾಗಗಳ ಬದಲಾವಣೆ ಕೆಲಸಗಳನ್ನು ಮಾಡಲಾಗುತ್ತದೆ. ಆಗಸ್ಟ್‌ ತಿಂಗಳು ಬರುತ್ತಿದ್ದಂತೆ ಈ ಘಟಕಗಳು ಮಂಜುಗಡ್ಡೆ ಉತ್ಪಾದನೆಗೆ ಸಜ್ಜಾಗಿರುತ್ತವೆ.

ಒಂದು ಯಾಂತ್ರೀಕೃತ ಮೀನುಗಾರಿಕಾ ದೋಣಿ ಕಡಲಿಗೆ ತೆರಳುವಾಗ 10ರಿಂದ 15 ಟನ್‌ಗಳಷ್ಟು ಮಂಜುಗಡ್ಡೆ ತುಂಬಿಸಿಕೊಂಡು ಹೋಗುತ್ತವೆ ಎನ್ನುತ್ತಾರೆ ಮೀನುಗಾರರು.

ಉಪ್ಪು ನೀರಿನದ್ದೇ ಸಮಸ್ಯೆ: ಮಲ್ಪೆ ಮತ್ತು ಪರಿಸರ ಪ್ರದೇಶಗಳಲ್ಲಿ ಬಾವಿ, ಬೋರ್‌ವೆಲ್‌ಗಳ ನೀರಿನಲ್ಲಿ ಬೇಸಿಗೆ ಕಾಲದಲ್ಲಿ ಉಪ್ಪಿನ ಅಂಶ ಜಾಸ್ತಿಯಾಗುವುದರಿಂದ ಈ ನೀರನ್ನು ಬಳಸಿ ಮಂಜುಗಡ್ಡೆ ಮಾಡಲು ಸಾಧ್ಯವಾಗುವುದಿಲ್ಲ. ಶುದ್ಧ ನೀರನ್ನು ಬೇರೆಡೆಯಿಂದ ಟ್ಯಾಂಕರ್‌ಗಳಲ್ಲಿ ತರಿಸಿಕೊಂಡು ಮಂಜುಗಡ್ಡೆ ಘಟಕಗಳಲ್ಲಿ ಬಳಸಲಾಗುತ್ತದೆ.

ಮಲ್ಪೆಯ ಮಂಜುಗಡ್ಡೆ ಘಟಕವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು
ಮಲ್ಪೆಯ ಮಂಜುಗಡ್ಡೆ ಘಟಕವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು
ಲಾರಿಗೆ ಮಂಜುಗಡ್ಡೆ ತುಂಬಿಸುತ್ತಿರುವ ಕಾರ್ಮಿಕ
ಲಾರಿಗೆ ಮಂಜುಗಡ್ಡೆ ತುಂಬಿಸುತ್ತಿರುವ ಕಾರ್ಮಿಕ
ಹುಡಿಮಾಡಿದ ಮಂಜುಗಡ್ಡೆಯನ್ನು ಲಾರಿಗೆ ತುಂಬಿಸುತ್ತಿರುವುದು
ಹುಡಿಮಾಡಿದ ಮಂಜುಗಡ್ಡೆಯನ್ನು ಲಾರಿಗೆ ತುಂಬಿಸುತ್ತಿರುವುದು
ಯಂತ್ರದೊಳಗೆ ಮಂಜುಗಡ್ಡೆ ಹಾಕುತ್ತಿರುವ ಕಾರ್ಮಿಕರು
ಯಂತ್ರದೊಳಗೆ ಮಂಜುಗಡ್ಡೆ ಹಾಕುತ್ತಿರುವ ಕಾರ್ಮಿಕರು

ಜೂನ್‌ ಜುಲೈ ತಿಂಗಳಲ್ಲಿ ನಾವು ಊರಿಗೆ ಹೋಗಿದ್ದೆವು. ಈ ಅವಧಿಯಲ್ಲಿ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಈಗ ಮಂಜುಗಡ್ಡೆ ಘಟಕದಲ್ಲಿ ಕೆಲಸ ಆರಂಭವಾಗಿರುವುದರಿಂದ ಮರಳಿದ್ದೇವೆ

- ಅಭಿಷೇಕ್‌ ಅಸ್ಸಾಂನ ಕಾರ್ಮಿಕ

ನಮ್ಮ ಊರಿನಲ್ಲಿ ಉದ್ಯೋಗಾವಕಾಶ ಕಡಿಮೆ ಇರುವುದರಿಂದ ಪ್ರತಿವರ್ಷ ದುಡಿಯಲು ಇಲ್ಲಿಗೆ ಬರುತ್ತೇವೆ. ಇಲ್ಲಿನ ಮಂಜುಗಡ್ಡೆ ಘಟಕಗಳಲ್ಲಿ ಪಾಳಿಯಲ್ಲಿ ದುಡಿಯುತ್ತೇವೆ

- ಆಕಾಶ್‌ ಬೊರುಹ ಅಸ್ಸಾಂನ ಕಾರ್ಮಿಕ

‘ಉತ್ಪಾದನಾ ವೆಚ್ಚ ಅಧಿಕ; ಲಾಭ ಕನಿಷ್ಠ’ ಮಂಜುಗಡ್ಡೆ ಘಟಕಗಳಲ್ಲಿ 24 ಗಂಟೆಯೂ ಯಂತ್ರಗಳು ಚಾಲನೆಯಲ್ಲಿ ಇರುವುದರಿಂದ ಪ್ರತಿ ತಿಂಗಳು ಒಂದೊಂದು ಘಟಕಕ್ಕೂ ₹4 ಲಕ್ಷದಿಂದ ₹5ಲಕ್ಷದ ವರೆಗೆ ವಿದ್ಯುತ್‌ ಬಿಲ್‌ ಬರುತ್ತದೆ. ಸರ್ಕಾರದಿಂದ ಸಣ್ಣ ಮೊತ್ತ ಸಹಾಯಧನ ಬಂದರೂ ಅದು ಯಾವುದಕ್ಕೂ ಸಾಲುವುದಿಲ್ಲ. ಇದರಿಂದಾಗಿ ಮಂಜುಗಡ್ಡೆಗಳ ಉತ್ಪಾದನಾ ವೆಚ್ಚವೇ ಅಧಿಕವಾಗಿ ಲಾಭ ಕನಿಷ್ಠವಾಗಿದೆ ಎಂದು ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ರಾಜ್ಯ ಘಟಕ ಕಾರ್ಯದರ್ಶಿ ಉದಯ್‌ಕುಮಾರ್‌ ತಿಳಿಸಿದರು. ಕಾರ್ಮಿಕರ ಕೂಲಿ ವಿದ್ಯುತ್ ಬಿಲ್ ಅಮೋನಿಯಾ ಸಿಲಿಂಡರ್‌ಗಳ ವೆಚ್ಚ ಸೇರಿ ನಮಗೆ ಸಿಗುವ ಲಾಭ ಅತಿ ಕಡಿಮೆ. ಅಮೋನಿಯಾ ಸಿಲಿಂಡರ್‌ಗಳ ದರ ಈಗ ₹8500ಕ್ಕೆ ಏರಿಕೆಯಾಗಿದೆ. ಇದು ಬೆಂಗಳೂರಿನಿಂದ ಬರುತ್ತದೆ. ನಮಗೆ ಸರ್ಕಾರದಿಂದ ಸಿಗುವ ಸಹಾಯಧನವನ್ನು ಹೆಚ್ಚು ಮಾಡಬೇಕು ಎಂದು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂಂದು ತಿಳಿಸಿದರು. ಅತಿಯಾದ ಉತ್ಪಾದನಾ ವೆಚ್ಚದ ಕಾರಣ ಘಟಕವನ್ನು ನಿರ್ವಹಿಸಲಾಗದೆ ಹತ್ತರಷ್ಟು ಘಟಕಗಳು ಈಗಾಗಲೇ ಬಾಗಿಲು ಮುಚ್ಚಿವೆ. ಆಗಸ್ಟ್‌ 15ರಿಂದ ನವೆಂಬರ್‌ 15ರವರೆಗಷ್ಟೇ ಮಂಜುಗಡ್ಡೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಬಳಿಕ ಕುಸಿಯುತ್ತದೆ. ಒಂದು ಕೆ.ಜಿ. ಮಂಜುಗಡ್ಡೆಯನ್ನು ₹1ಕ್ಕೆ ಮಾರಾಟ ಮಾಡುತ್ತಿದ್ದೇವೆ. ಮೀನುಗಾರರು ಮೊದಲೇ ಸಮಸ್ಯೆಯಲ್ಲಿರುವುದರಿಂದ ದರ ಏರಿಕೆ ಮಾಡಲು ಆಗುವುದಿಲ್ಲ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT