ಮಂಗಳವಾರ, ಮಾರ್ಚ್ 2, 2021
31 °C
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಖ್ಯಾತ ಮನೋವೈದ್ಯ ಪಿ.ವಿ.ಭಂಡಾರಿ ಸಲಹೆ

ಅರಳುವ ಹೂಗಳು ಬಾಡದಂತೆ ರಕ್ಷಿಸಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಮುಗ್ಧ ಮಕ್ಕಳ ಮೇಲಿನ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಾಗರಿಕರನ್ನು ಬೆಚ್ಚಿಬೀಳಿಸಿವೆ. ಕಾಮುಕರಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಪೋಷಕರು, ಶಾಲೆಗಳ ಜವಾಬ್ದಾರಿಗಳೇನು? ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬೇಕು? ನಾಗರಿಕ ಸಮಾಜದ ಸಹಭಾಗಿತ್ವ ಏನು ಎಂಬ ಬಗ್ಗೆ ಎ.ವಿ.ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಪಿ.ವಿ.ಭಂಡಾರಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ ಎಷ್ಟಿದೆ?
ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೋಷಕರಿಗಿರುವ ಕಾಳಜಿ ತೀರಾ ಕಡಿಮೆ. ಅದರಲ್ಲೂ ಮಧ್ಯಮ ವರ್ಗದಲ್ಲಿ ಅಪ್ಪ–ಅಮ್ಮ ಇಬ್ಬರೂ ದುಡಿಯಲು ಹೋಗುತ್ತಾರೆ. ಶಾಲೆಯಿಂದ ಬರುವ ಮಕ್ಕಳು ಸಂಜೆ ವೇಳೆ ಒಂಟಿಯಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಸುಲಭವಾಗಿ ಕಾಮುಕರಿಗೆ ಬಲಿಯಾಗುತ್ತಾರೆ. ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸುವುದು ತಪ್ಪು. ಈ ಬಗ್ಗೆ ಪೋಷಕರು ಕಾಳಜಿ ವಹಿಸಲೇಬೇಕು. ಪೋಷಕರು ಮಕ್ಕಳ ಮಾತಿಗೆ ಕಿವಿಗೊಡಬೇಕು. ಹಲವು ಸಂದರ್ಭಗಳಲ್ಲಿ ತೀರಾ ಹತ್ತಿರದ ಸಂಬಂಧಿಗಳೇ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ಮಕ್ಕಳು ನೋವನ್ನು ಹೇಳಿಕೊಂಡಾಗ ಪೋಷಕರು ನಂಬುವುದಿಲ್ಲ. ಬದಲಾಗಿ ಮಕ್ಕಳನ್ನೇ ದೂಷಿಸುತ್ತಾರೆ. ಮಕ್ಕಳು ಸುಳ್ಳು ಹೇಳುವುದಿಲ್ಲ. ಅವರ ಮಾತನ್ನು ನಂಬಬೇಕು.

* ಅಪರಿಚಿತರ ಬಗ್ಗೆ ಎಚ್ಚರವಹಿಸುವುದು ಹೇಗೆ?
ಅಪರಿಚಿತರು, ಮಾನಸಿಕ ರೋಗಿಗಳು ಮಾತ್ರ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದೇನಿಲ್ಲ. ಮಾನಸಿಕ ವಿಕೃತರು ಇಂತಹ ಹೇಯ ಕೃತ್ಯಗಳನ್ನು ಎಸಗುತ್ತಾರೆ. ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ, ಎಚ್ಚರವಾಗಿರಬೇಕಷ್ಟೆ. ಮಕ್ಕಳ ಮೇಲಿನ ಬಹುತೇಕ ಲೈಂಗಿಕ ದೌರ್ಜನ್ಯಗಳು ಪರಿಚಿತರೇ ಎಸಗಿರುವುದು ಆತಂಕ ಸೃಷ್ಟಿಸುವ ವಿಚಾರ.

* ಬಾಲಕರ ಮೇಲೂ ಲೈಂಗಿಕ ದೌರ್ಜನ್ಯ ಆತಂಕಕಾರಿಯಲ್ಲವೇ ?
ಹೆಣ್ಣುಮಕ್ಕಳ ಮೇಲಷ್ಟೇ ಅತ್ಯಾಚಾರಗಳು ನಡೆಯುವುದಿಲ್ಲ. 2005ರಲ್ಲಿ ಬಿಡುಗಡೆಯಾದ ಅಂಕಿ–ಅಂಶಗಳ ಪ್ರಕಾರ ದೇಶದಲ್ಲಿ ಶೇ 55ರಷ್ಟು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತದೆ. ಅದರಲ್ಲಿ ಬಾಲಕರ ಮೇಲೆ ನಡೆಯುವ ಪ್ರಮಾಣವೇ ಹೆಚ್ಚು. ಹಾಗಾಗಿ, ಗಂಡಾಗಲಿ, ಹೆಣ್ಣಾಗಲಿ ಪೋಷಕರು ನಿರ್ಲಕ್ಷ್ಯ ತೋರಬಾರದು.

* ಶಾಲೆಗಳ ಕರ್ತವ್ಯಗಳು ಏನು?
ಶಾಲೆಗಳ ಜವಾಬ್ದಾರಿ ತುಂಬಾ ದೊಡ್ಡದು. ಮಕ್ಕಳಿಗೆ ಗುಡ್‌ ಟಚ್‌, ಬ್ಯಾಡ್‌ ಟಚ್‌ಗಳ ಬಗ್ಗೆ ತಿಳಿಹೇಳಬೇಕು. ಮಕ್ಖಳ ಖಾಸಗಿ ಅಂಗಗಳನ್ನು ಯಾರಾದರೂ ಸ್ಪರ್ಶಿಸಲು ಮುಂದಾದರೆ ಹೇಗೆ ಪ್ರತಿರೋಧಿಸಬೇಕು ಎಂಬುದನ್ನು ಹೇಳಿಕೊಡಬೇಕು. ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ಸೂಕ್ಷ್ಯ ವಿಚಾರಗಳನ್ನು ಮನದಟ್ಟು ಮಾಡಿಸಬೇಕು. ಶಾಲೆಯಲ್ಲಿ ಕೆಲಸ ಮಾಡುವ ಆಯಾಗಳು, ಸೆಕ್ಯುರಿಟಿ, ಆಟೊ ಚಾಲಕ ಹಾಗೂ ಸಿಬ್ಬಂದಿಯ ಪೂರ್ವಾಪರ ತಿಳಿದುಕೊಳ್ಳಬೇಕು.

* ಮಕ್ಕಳು ಏನು ಮಾಡಬೇಕು?
ಬಹುತೇಕ ಲೈಂಗಿಕ ದೌರ್ಜನ್ಯಗಳು ನಡೆಯುವುದು ನಿರ್ಜನ ಪ್ರದೇಶಗಳಲ್ಲಿ. ಮಕ್ಕಳ ಖಾಸಗಿ ಅಂಗಗಳನ್ನು ಬಲವಂತವಾಗಿ ಮುಟ್ಟಲು ಬಂದರೆ, ಜೋರಾಗಿ ಕಿರುಚಿಕೊಳ್ಳಬೇಕು. ಜನಸಂದಣಿ ಕಡೆಗೆ ಓಡಿಹೋಗಬೇಕು. ಪೋಷಕರಿಗೆ ವಿಷಯ ತಿಳಿಸಬೇಕು. 

* ಕಾನೂನು ನೆರವು ಪಡೆಯುವುದು ಹೇಗೆ?
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ಕಾನೂನುಗಳಿವೆ. ಅದರಲ್ಲಿ ಪೋಕ್ಸೊ ಪ್ರಮುಖ ಅಸ್ತ್ರ. ಈ ಕಾನೂನಿನಡಿ ಮಕ್ಕಳೇ ದೂರು ನೀಡಬೇಕು ಎಂದಿಲ್ಲ. ಪೋಷಕರು, ಸಂಬಂಧಿಗಳು, ನಾಗರಿಕರು ದೂರು ನೀಡಬಹುದು. ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಪೊಲೀಸ್ ಠಾಣೆಗೂ ಕರೆ ಮಾಡಬಹುದು. ಈ ಬಗ್ಗೆ ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಾಗಾರ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಶಿಬಿರಗಳು ನಡೆಯಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು