ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬಡ ಮಹಿಳೆಗೆ ಸೂರು ಕೊಟ್ಟ ಜಮಾತೆ ಇಸ್ಲಾಮಿ ಹಿಂದ್

Last Updated 20 ನವೆಂಬರ್ 2022, 6:50 IST
ಅಕ್ಷರ ಗಾತ್ರ

ಉಡುಪಿ: ಪಡುತೋನ್ಸೆ ಗುಜ್ಜರಬೆಟ್ಟಿನ ನಿವಾಸಿ, ಆರ್ಥಿಕವಾಗಿ ದುರ್ಬಲರಾಗಿರುವ ಶುಭಲಕ್ಷ್ಮಿ ಅವರಿಗೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹೂಡೆ ಶಾಖೆಯಿಂದ ಮನೆ ಕಟ್ಟಿಸಿಕೊಡಲಾಯಿತು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮನೆಯ ಕೀಲಿಕೈ ಅನ್ನು ಡಾ.ಶಹನವಾಝ್ ಅವರು ಶುಭಲಕ್ಷ್ಮಿ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿ, ಜಮಾತೆ ಇಸ್ಲಾಮಿ ಹಿಂದ್ ದುರ್ಬಲ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುತ್ತಿರುವುದು ಪ್ರಶಂಸನೀಯ ಕೆಲಸ. ಕೋವಿಡ್ ಸಂದರ್ಭದಲ್ಲೂ ಸಂಸ್ಥೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ನೆರವು ನೀಡಿದೆ ಎಂದು ಶ್ಲಾಘಿಸಿದರು.

ಮುಖಂಡರಾದ ನಾರಾಯಣ ಮಣೂರು ಮಾತನಾಡಿ ಹೋರಾಟಗಳ ಹೊರತಾಗಿಯೂ ಜನರ ಸಮಸ್ಯೆ ಹಾಗೂ ನೋವುಗಳಿಗೆ ವಿಭಿನ್ನ ರೀತಿಯಲ್ಲಿ ಸ್ಪಂದಿಸಬಹುದು ಎಂಬುದನ್ನು ಜಮಾತೆ ಇಸ್ಲಾಮಿ ಹಿಂದ್ ತೋರಿಸಿಕೊಟ್ಟಿದೆ.

ಜಾತಿ ಧರ್ಮಗಳ ಮೇರೆ ಮೀರಿ ಸಮಾಜದ ಕಣ್ಣೀರು ಒರೆಸುವುದು, ಆಸರೆ ಕಲ್ಪಿಸುವುದು ಕೂಡ ಹೋರಾಟವೇ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಉದ್ದೇಶವೂ ಜನರ ನೋವಿಗೆ ಆಸರೆಯಾಗುವುದು ಆಗಿತ್ತು ಎಂದರು.

ಜಮಾತೆ ಇಸ್ಲಾಮಿ ಹಿಂದ್ ಹೂಡೆ ಸಂಘಟನೆ ಐದಾರು ವರ್ಷಗಳಲ್ಲಿ ಜಾತಿಧರ್ಮಗಳ ಹಂಗಿಲ್ಲದೆ 32 ಮನೆಗಳನ್ನು ನಿರ್ಮಿಸಿಕೊಟ್ಟಿರುವುದು ಸಂತೋಷದ ಸಂಗತಿ ಎಂದರು.

ತೋನ್ಸೆ-ಹೂಡೆ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ ನೆರೆ ಹೊರೆಯವರು ಆಹಾರ, ಸೂರು ಮತ್ತು ಇತರ ಅಗತ್ಯಗಳಿಗೆ ಪರಿತಪಿಸುವಾಗ ನಿರ್ಲಿಪ್ತರಾಗಿ ಬದುಕುವುದು ಧಾರ್ಮಿಕತೆಯಲ್ಲ ಎಂದರು.

ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಉಡುಪಿಯ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ತೋನ್ಸೆ ಪಂಚಾಯಿತಿ ಕಾರ್ಯದರ್ಶಿ ದಿನಕರ್ ಬೇಂಗ್ರೆ, ಸತೀಶ್ ಮಲ್ಪೆ, ಪಂಚಾಯಿತಿ ಸದಸ್ಯೆ ಸುಝನಾ ಡಿಸೋಝಾ ಮಾತನಾಡಿದರು.

ಪಂಚಾಯಿತಿ ಸದಸ್ಯ ವಿಜಯ ಪಡುಕುದ್ರು, ಮಹೇಶ್ ಹೂಡೆ, ಕುಸುಮ ಗುಜ್ಜರಬೆಟ್ಟು, ಆಶಾ ತಿಮ್ಮಣ್ಣಕುದ್ರು, ಯಶೋಧಾ ಕೆಮ್ಮಣ್ಣು, ಎಚ್‌ಆರ್‌ಎಸ್‌ ಸಂಘಟನೆಯ ಹಸನ್ ಕೋಡಿಬೇಂಗ್ರೆ, ಝೈನುಲ್ಲಾ ಹೂಡೆ, ಎಸ್‌.ಐ.ಒ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.

ಮೌಲಾನಾ ತಾರೀಕ್ ಕುರಾನ್ ಪಠಿಸಿದರು. ಸಾಲಿಡಾರಿಟಿ ಯೂತ್ ಮೂಮೆಂಟ್‌ನ ಯಾಸೀನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT