ಶನಿವಾರ, ಮಾರ್ಚ್ 25, 2023
23 °C
ಕಲಾವಿದ ಜನಾರ್ದನ ಹಾವಂಜೆ ಅವರ ವರ್ಣ ಚಿತ್ರ ಕಲಾ ಪ್ರದರ್ಶನ ಡಿ.14ರವರೆಗೆ

ಕಲೆಯಲ್ಲಿ ಅಭಿವ್ಯಕ್ತಗೊಂಡ ಸೃಷ್ಟಿಯ ಪ್ರಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಲಾವಿದ ಜನಾರ್ದನ ಹಾವಂಜೆ ‘ಹಳೆಬೇರು ಹೊಸ ಚಿಗುರು’ ಪರಿಕಲ್ಪನೆಯಲ್ಲಿ ಜಲವರ್ಣ ಚಿತ್ರಕಲಾ ಕೃತಿಗಳ ಕಲಾಪ್ರದರ್ಶನವನ್ನು ಬಡಗುಪೇಟೆಯಲ್ಲಿ ಶನಿವಾರದಿಂದ ಆರಂಭವಾಗಿದೆ. ಡಿ.14ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಸಾರ್ವಜನಿಕರು ಉಚಿತವಾಗಿ ಪ್ರದರ್ಶನ ವೀಕ್ಷಿಸಬಹುದು.

ಭಾವನಾ ಪ್ರತಿಷ್ಠಾನ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಆರ್ಟಿಸ್ಟ್ ಫೋರಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಕಲಾ ಪ್ರದರ್ಶನಕ್ಕೆ ಶನಿವಾರ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಯು.ವಿಶ್ವನಾಥ ಶೆಣೈ ಚಿಗುರಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕಲಾ ಪ್ರದರ್ಶನದಲ್ಲಿ ಆಕರ್ಷಕ ಜಲವರ್ಣ ಚಿತ್ರಗಳಿದ್ದು ಕಲಾಸಕ್ತರು ವೀಕ್ಷಿಸಬಹುದು, ಖರೀದಿಸಲೂಬಹುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಮಾತನಾಡಿ, ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಕಲಾಪ್ರಕಾರಗಳಲ್ಲಿ ಶ್ರೀಮಂತವಾಗಿದ್ದು, ಲಲಿತ ಕಲೆಗಳಲ್ಲೂ ಛಾಪು ಮೂಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲೆಗಳನ್ನು ಪೋಷಿಸಿಕೊಂಡು ಬರುತ್ತಿದ್ದು ಮುಂದೆಯೂ ಕಲಾವಿದರಿಗೆ ಕಲಾ ಸಂಸ್ಥೆಗಳಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಮಗುವಿನಂತಹ ಗುಣಗಳು ಇರುವ, ಜಗತ್ತನ್ನು ಬೆರಗುಗಣ್ಣಿನಿಂದ ನೋಡುವವರು ಮಾತ್ರ ಕಲಾವಿದರಾಗಲು ಸಾಧ್ಯ. ಅಂತಹ ಗುಣಗಳು ಇರುವ ಜನಾರ್ದನ ಹಾವಂಜೆ ಪರಂಪರೆ ಹಾಗೂ ಆಧುನಿಕತೆಯನ್ನು ಬಿಂಬಿಸುವ ಜಲವರ್ಣ ಚಿತ್ರಗಳನ್ನು ಸುಂದರವಾಗಿ ರಚಿಸಿ ಪ್ರದರ್ಶನಕ್ಕಿಟ್ಟಿದ್ದಾರೆ ಎಂದರು.

ಹಾವಂಜೆ ಅವರ ಚಿತ್ರಗಳಲ್ಲಿ ಜೀವಂತಿಕೆ ಇದೆ. ಕರಾವಳಿಯ ಮಣ್ಣಿನ ಘಮಲು ತುಂಬಿಕೊಂಡಿದೆ. ಚಿತ್ರಗಳು ಪರಿಸರಕ್ಕೆ ಪೂರಕವಾಗಿದ್ದು ಜೀವ ಕಳೆ ಅಭಿವ್ಯಕ್ತವಾಗಿದೆ ಎಂದರು.

ಅಳಿವಿನಂಚಿನಲ್ಲಿರುವ ಖಾವಿ ಚಿತ್ರ ಕಲೆಯನ್ನು ಉಳಿಸಿ ಬೆಳೆಸುವಲ್ಲಿಯೂ ಜನಾರ್ದನ ಹಾವಂಜೆ ನಿರತರಾಗಿದ್ದು, ಅವರ ಕಾರ್ಯ ನಿರಂತರವಾಗಿರಲಿ ಎಂದರು.

ಯಕ್ಷ ರಂಗಾಯಣದ ಅಧ್ಯಕ್ಷ ಜೀವನರಾಂ ಸುಳ್ಯ ಮಾತನಾಡಿ, ಉಡುಪಿ ಚಿತ್ರಕಲೆಯ ಬೆಳವಣಿಗೆಗೆ ಕೊಟ್ಟ ಕೊಡುಗೆ ಅಪಾರ. ಕರಾವಳಿಯ ನೆಲದಲ್ಲಿ ಅತ್ಯಂತ ಕ್ರಿಯಾಶೀಲ ಕಲಾವಿದರಿದ್ದಾರೆ. ಜನಾರ್ದನ ಹಾವಂಜೆ ಅವರ ಕಲೆಗಳಲ್ಲಿ ರಾಸಾಯನಿಕ ಬಳಕೆ ಇಲ್ಲ. ಪರಿಸರಕ್ಕೆ ಪೂರಕವಾದ ಬಣ್ಣ ಹಾಗೂ ಪೇಪರ್ ಬಳಕೆಯಾಗಿದೆ ಎಂಬುದು ವಿಶೇಷ ಎಂದರು.

ರಾಜೇಶ್ ಭಟ್ ಧನ್ಯವಾದ ಸಮರ್ಪಿಸಿದರು.

ಕಲಾಪ್ರದರ್ಶನ ವಿಶೇಷ ಏನು?
ಜಲವರ್ಣ ಚಿತ್ರ ಕಲಾಕೃತಿಗಳ ರಚನೆಗೆ ರಾಸಾಯನಿಕ ಬಳಸದಿರುವುದು ವಿಶೇಷ. ಬಣ್ಣದಿಂದ ಹಿಡಿದು ಕಾಗದವರೆಗಿನ ಎಲ್ಲ ವಸ್ತುಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ. ಬಾಳೆ, ಅಡಿಕೆ, ಹೆಂಪನ್ನು ಬಳಸಿಕೊಂಡು ಕಲಾವಿದ ಜನಾರ್ದನ ಹಾವಂಜೆ ಸ್ವತಃ ಕಾಗದಗಳನ್ನು ತಯಾರಿಸಿ ಚಿತ್ರಕಲೆಗೆ ಬಳಸಿಕೊಂಡಿದ್ದಾರೆ. ಟಿಶ್ಯು ಪೇಪರ್ ಕೂಡ ಮರುಬಳಕೆಯಾಗಿ ಕಾಗದದ ರೂಪ ಪಡೆದುಕೊಂಡಿರುವುದು ವಿಶೇಷ.

‘ನಿಸರ್ಗವೇ ಕಲೆಯ ಮೂಲ’
‘ಹಳೆ ಬೇರು ಹೊಸ ಚಿಗುರು’ ಎಂಬುದು ಸೃಷ್ಟಿಯ ಪ್ರಕ್ರಿಯೆ. ಹುಟ್ಟು ಸಾವಿನ ಸೂಚಕ. ನಿಸರ್ಗವನ್ನೇ ಮೂಲವಾಗಿಟ್ಟುಕೊಂಡು ಸೃಷ್ಟಿ ಹಾಗೂ ಅಂತ್ಯದ ಪರಿಕಲ್ಪನೆಗೆ ಕಲೆಯ ರೂಪ ಕೊಡಲಾಗಿದೆ. 44 ವರ್ಣ ಚಿತ್ರಗಳು ಕಲಾ ಪ್ರದರ್ಶನದಲ್ಲಿ ಇಡಲಾಗಿದೆ.
–ಜನಾರ್ದನ ಹಾವಂಜೆ, ಕಲಾವಿದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು