ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕಂಬಳ ಮನೆಗೆ ಹೊಸತನದ ಸ್ಪರ್ಶ

₹ 3.50 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಕಟಪಾಡಿ ಬೀಡು
Last Updated 5 ಫೆಬ್ರುವರಿ 2022, 3:02 IST
ಅಕ್ಷರ ಗಾತ್ರ

ಶಿರ್ವ: ಶಿಥಿಲಾವಸ್ಥೆಯಲ್ಲಿದ್ದ ಕಟಪಾಡಿ ಬೀಡಿನ ಮನೆಯನ್ನು ಸುಮಾರು ₹ 3.50 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ.

ಕಟಪಾಡಿ ಬೀಡಿನ ರೂಪುರೇಷೆ ಯನ್ನು ಹಳೆಯ ಮಾದರಿಯಲ್ಲಿಯೇ ಕಲಾತ್ಮಕ ಕಾಷ್ಠಶಿಲ್ಪ ವೈಭವದೊಂದಿಗೆ ನವೀಕರಿಸಿ, ಕಂಬಳ ಮನೆಗೆ ಹೊಸತನದ ಸ್ಪರ್ಶ ನೀಡಲಾಗಿದೆ.

ಫೆ.5ಮತ್ತು 6ರಂದು ಕಟಪಾಡಿ ಬೀಡಿನ ಗೃಹಪ್ರವೇಶೋತ್ಸವ ದೊಂದಿಗೆ ಕುಟುಂಬಸ್ಥರು ಆರಾಧಿಸಿ ಕೊಂಡು ಬಂದಿರುವ ನಾಗಬ್ರಹ್ಮಾದಿ, ಪಂಚದೈವಿಕ ಸನ್ನಿಧಿ, ಈಶ್ವರಕುಮಾರ, ಕಾಂತೇರಿ ಜುಮಾದಿ, ದೈಯಂದಿ ಪಟ್ಟದ ಪಂಜುರ್ಲಿ, ಮಂಜೊಟ್ಟಿ ಜುಮಾದಿ ಸಹಿತ ಪರಿವಾರ ಶಕ್ತಿಗಳ ನೂತನ ಆವರ್ಕ ಆರೂಢದಲ್ಲಿ ದೈವಗಳ ಪುನಃಪ್ರತಿಷ್ಠೆ, ಮಹಾಕಲಶಾಭಿಷೇಕ, ದೈವ ಸಂದರ್ಶನ, ಅನ್ನಸಂತರ್ಪಣೆ ನಡೆಯಲಿದೆ.

ಕಟಪಾಡಿ ಬೀಡು ಜಿಲ್ಲೆಯ ಪ್ರಸಿದ್ಧ ಮನೆತನಗಳಲ್ಲಿ ಒಂದಾಗಿದೆ. ಅಂದು ಬೀಡಿನ ಯಜಮಾನರು ‘ದೊರೆ ಬಲ್ಲಾಳರು’ ಎಂಬ ಬಿರುದು ಪಡೆದಿದ್ದರು. ‘ಕಟಪಾಡಿ ಸಾವಿರ ಸೀಮೆ’ ಅಂತಲೂ ಹೆಸರುವಾಸಿಯಾಗಿದ್ದ ಆರು ಮಾಗಣೆಗಳನ್ನು ದೊರೆಬಲ್ಲಾಳರು ಆಳುತ್ತಿದ್ದರು. ಮಾಗಣೆಗಳಾದ ಅಂಬಾಡಿ, ಕೋಟೆ, ಮಟ್ಟು, ಕುರ್ಕಾಲು, ಪೊಸಾರು, ಮೂಡುಬೆಟ್ಟು, ಕಟಪಾಡಿ ಇವೆಲ್ಲವೂ ಅವರ ಆಡಳಿತಕ್ಕೊಳಪಟ್ಟಿದ್ದವು.

‘ಕಟಪಾಡಿ ಬೀಡಿನ ಮನೆತನದ ಮೂಲ ಪ್ರಾರಂಭವಾದದ್ದು ಜೈನ ಮನೆತನದ ಮಹಿಳೆ ಪದ್ಮಾವತಿ ಅಮ್ಮನವರಿಂದ. ಇವರು ಕುಂದ ಅರಸುವಿನ ಮಗಳು. ಬಾರ್ಕೂರು ಪಾಂಡ್ಯ ಅರಸುವಿನ ಮಡದಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಪ್ರಥಮ ಪುತ್ರಿ ಬೂಬು ಶೆಡ್ತಿ ಮತ್ತು ದ್ವಿತೀಯ ಪುತ್ರಿ ಭಾಮು ಶೆಡ್ತಿ. ಪಾಂಡ್ಯ ಅರಸು ತಾನು ಆಳುವ ಮಾಗಣೆಗಳಾದ ಕಟಪಾಡಿ ಬೀಡಿನ ಮನೆತನದ ಆಡಳಿತವನ್ನು ತನ್ನ ಹಿರಿಯ ಮಗಳಿಗೂ, ಅಂಬಾಡಿ ಬೀಡಿನ ಮನೆತನದ ಆಡಳಿತವನ್ನು ತನ್ನ ಕಿರಿಯ ಮಗಳಿಗೂ ವಹಿಸಿ ಕೊಟ್ಟು ತಾನು ನಿರಾಳವಾದ. ಹೀಗೆ ಬೂಬು ಶೆಡ್ತಿಯ ರಾಜ ಮನೆತನದ ಹೆಸರು ಬೂಬು ಬಲ್ಲಾಳ್ತಿಯಾಗಿ ಬದಲಾಯಿತು’ ಎಂಬ ಮಾಹಿತಿಯನ್ನು ನೀಡುತ್ತಾರೆ ಕಟಪಾಡಿ ಬೀಡುಮನೆ ಸ್ಮಿತಾ ಬಲ್ಲಾಳ್.

‘ಬೀಡಿನ ಪಟ್ಟದ ಚಾವಡಿಯಲ್ಲಿ ಗ್ರಾನೈಟ್ ಶಿಲೆಯಲ್ಲಿ ತಯಾರಿಸಲಾದ ಪಟ್ಟದ ಸಿಂಹಾಸನವಿದ್ದು, ಗೋಡೆಯ ಮೇಲೆ ಶ್ರೀರಾಮನ ಪಟ್ಟಾಭಿಷೇಕದ ಸಮಯದಲ್ಲಿನ ಸೀತಾಸಮೇತ ರಾಮ, ಲಕ್ಷ್ಮಣ ಹಾಗೂ ರಾಮನ ಕಾಲ ಬಳಿ ಕುಳಿತ ಹನುಮಂತನ ಸುಂದರ ಕಲಾಕೃತಿಯನ್ನು ಹೊಂದಿದ್ದು, ಪಟ್ಟದ ಸಿಂಹಾಸನ ಪಟ್ಟಾಭಿಷೇಕದ ಸಂಕೇತವಾಗಿದೆ’ ಎನ್ನುತ್ತಾರೆ ಕಟಪಾಡಿ ಬೀಡು ಸುಭಾಸ್ ಬಲ್ಲಾಳ್.

‘ಈ ಮನೆತನದಲ್ಲಿ ಜಗನ್ನಾಥ ಬಲ್ಲಾಳರು ದೊರೆ ಬಲ್ಲಾಳರಾಗಿ ತುಂಬಾ ಪ್ರಸಿದ್ಧಿ ಪಡೆದಿದ್ದರು. ಆಗಿನ ಕಾಲದಲ್ಲಿ ವಿದ್ಯಾವಂತ ಬಂಟರಲ್ಲೊಬ್ಬರಾಗಿದ್ದ ಜಗನ್ನಾಥ ಬಲ್ಲಾಳರು ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕರಾಗಿದ್ದರು. 1950ರಲ್ಲಿ ಕೊನೆಯ ದಾಗಿ ಸಿಂಹಾಸನದಲ್ಲಿ ಕುಳಿತವರು ಸೀತಾರಾಮ ದೊರೆ ಬಲ್ಲಾಳರೆನಿಸಿ ಕೊಂಡರು ಎನ್ನುತ್ತಾರೆ’ ಕಟಪಾಡಿ ಬೀಡುಮನೆ ವಿನಯ ಬಲ್ಲಾಳ್.

ಬೀಡಿನ ಮನೆಯಲ್ಲಿ ನಾಲ್ಕು ಚಾವಡಿ ಗಳು ಇದ್ದು, ಅದೇ ಮಾದರಿಯಲ್ಲಿ ಹೊಸ ರೂಪ ನೀಡಲಾಗಿದೆ. ಪಟ್ಟದ ಚಾವಡಿ- ದೈವ-ದೇವರ ಕಾರ್ಯಗಳು ನಡೆಯುವ ಸ್ಥಳ ನಡುಚಾವಡಿ, ಮನೆತನದ ಮದುಮಕ್ಕಳ ಮುಹೂರ್ತ ನಡೆಯುವ ಸ್ಥಳ, ಪಡ್ಡಾಯಿ ಚಾವಡಿ ಕಿಂಚಾವಡಿ ಎಂದು ಹೆಸರಿಸಲಾಗಿದೆ.

‘ವರ್ಷಂಪ್ರತಿ ನಡೆಯುವ ಐತಿಹಾಸಿಕ ಕಟಪಾಡಿ ಕಂಬಳದ ಸಮಯದಲ್ಲಿ ಕಟಪಾಡಿ ಬೀಡಿನ ಮನೆಯ ಕೋಣಗಳನ್ನು ಓಲಗ, ವಾದ್ಯಗಳೊಂದಿಗೆ ಮೊದಲು ಕೆಸರುಗದ್ದೆಗಿಳಿಸುತ್ತಿದ್ದು, ಈ ವಾಡಿಕೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ’ ಎನ್ನುತ್ತಾರೆ ಕಟಪಾಡಿ ಬೀಡುಮನೆ ಕೆ.ಗೋವಿಂದದಾಸ್ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT