ಕಾರ್ಕಳ: ಕಾರ್ಕಳ– ಬೆಳ್ಮಣ್– ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್ ಸಂಗ್ರಹ ಆದೇಶದ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ ಬಿಜೆಪಿಯ ವಿಕಾಸ ಕಚೇರಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಪ್ರಮುಖರೊಂದಿಗೆ ಬುಧವಾರ ನಡೆಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಟೋಲ್ ಸಂಗ್ರಹಕ್ಕೆ ಆದೇಶ ಮಾಡಿರುವುದನ್ನು ಬಿಜೆಪಿ ವಿರೋಧಿಸುತ್ತದೆ, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತದೆ. ಈ ಬಗ್ಗೆ 24ರಂದು ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯ ಸಾರ್ವಜನಿಕ ಪ್ರತಿಭಟನೆಗೆ ಪ್ರತಿ ಗ್ರಾಮದಿಂದ ಒಂದು ಬಸ್ ಮೂಲಕ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದು. ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು.