ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಕರ್ನಾಟಕ ಪಬ್ಲಿಕ್ ಸ್ಕೂಲ್‌- ಸೌಲಭ್ಯದ ಚಿಂತೆ

ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಮುಂದೆ; ಶಿಕ್ಷಕರ ಕೊರತೆ
Last Updated 16 ಜುಲೈ 2021, 5:07 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ದಾಖಲಾತಿ ಏರಿಕೆ ಕಂಡಿದೆ.

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗಿರುವುದರಿಂದ ಪ್ರಾಯೋಗಿಕವಾಗಿ 2019– 20 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಪ್ರಾರಂಭ ಆಯಿತು. ಕಾಪು ತಾಲ್ಲೂಕಿನ ಪಡುಬಿದ್ರಿ ಬೋರ್ಡ್‌ ಶಾಲೆಯು ಕೆಪಿಎಸ್ ಶಾಲೆ ಎಂದು ಹೆಸರು ಬದಲಾಯಿಸಿಕೊಂಡಿತು.

ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಪ್ರಗತಿ ಕಂಡಿರಲಿಲ್ಲ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ದಾಖಲೆಯ ಪ್ರಗತಿ ಕಂಡಿದೆ. ಆದರೆ, ಶಿಕ್ಷಕರ ಕೊರತೆ ಜತೆಗೆ ಮೂಲ ಸೌಲಭ್ಯಗಳು ಕಾಡುತ್ತಿವೆ.

2019 - 20 ನೇ ಸಾಲಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಆಗಿರುವ ಪಡುಬಿದ್ರಿ ಬೋರ್ಡ್‌ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಹಂತದ ‌ತರಗತಿ ನಡೆಯುತ್ತವೆ. ಸರ್ಕಾರದ ಆದೇಶದಂತೆ ಎಲ್‌ಕೆಜಿಯಿಂದ 1 ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 3ನೇ ತರಗತಿಯವರೆಗೆ ಕೆಪಿಎಸ್ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಆದ್ಯತೆ ನೀಡಲಾಗಿದೆ. ಕೋವಿಡ್ ಸಂಕಷ್ಟದಿಂದ ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕದಿಂದ ಪಾಲಕರು ಈ ಶಾಲೆಗೆ ಮಕ್ಕಳ ದಾಖಲಾತಿ ಮಾಡುವ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಕೀರ್ತಿ ತಿಳಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆ ಜಿಯಿಂದ 3ನೇ ತರಗತಿಯವರೆಗೆ ಒಟ್ಟು 144, 4 ರಿಂದ 7ನೇ ತರಗತಿಯವರೆಗೆ 44, ವಿದ್ಯಾರ್ಥಿಗಳಿದ್ದಾರೆ. ಕೆಪಿಎಸ್ ಆರಂಭಕ್ಕೂ ಮೊದಲು 1ರಿಂದ 7ನೇ ತರಗತಿಯವರೆಗೆ 105 ಮಕ್ಕಳು ಶಾಲೆಯಲ್ಲಿದ್ದರು. ಹೊರ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಶಾಲಾ ಪ್ರವೇಶಾತಿಗೆ ಬೇಡಿಕೆಯಿದ್ದರೂ, ಸ್ಥಳೀಯ ವಿದ್ಯಾರ್ಥಿ ನಿಲಯ ನಿರ್ಮಾಣ ಹಂತದಲ್ಲಿ ಇರುವುದರಿಂದ ಸಮಸ್ಯೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಶಾಲೆಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ಪ್ರಾಥಮಿಕಕ್ಕೆ ಮೂರು ಮಂದಿ, ಪೂರ್ವ ಪ್ರಾಥಮಿಕ ವಿಭಾಗಕ್ಕೆ ಇಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಇಬ್ಬರು ಅತಿಥಿ ಶಿಕ್ಷಕರಿಗೆ ವರ್ಷದಿಂದ ಗೌರವಧನವನ್ನು ನೀಡಿಲ್ಲ. ಮಕ್ಕಳ ಸಂಖ್ಯೆ ಹೆಚ್ಚಳ ಆಗುತ್ತಿರುವುದರಿಂದ ಇನ್ನಷ್ಟು ಶಿಕ್ಷಕರ ನಿಯೋಜನೆ ಆಗಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ ಶೌಚಾಲಯ ಇದ್ದು, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಇಂಗ್ಲಿಷ್‌ ಮಾಧ್ಯಮ ತರಗತಿಗೆ ಅಗತ್ಯ ಸೌಕರ್ಯ, ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣ ಅಗತ್ಯವಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ ಆಗಿ ಮಾರ್ಪಾಡು ಆಗಿದ್ದರೂ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿಭಾಗ ಇರುವುದರಿಂದ ಸಮಗ್ರ ನಿರ್ವಹಣೆ ಗೊಂದಲಗಳಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

‘ಇಲಾಖೆ ಗಮನಕ್ಕೆ ತರಲಾಗಿದೆ’

ಪಡುಬಿದ್ರಿ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡಿದೆ. ಆದರೆ ಶಾಲೆಗೆ ಬೇಕಾದ ಸೌಕರ್ಯಗಳಿಗೆ ಅನುದಾನಗಳು ಹಂತ ಹಂತವಾಗಿ ಬರಲಿದೆ. ನರೇಗಾದಲ್ಲಿ ಶಾಲಾ ಮೈದಾನದ ಸುತ್ತ ಆವರಣ ಗೋಡೆ ನಿರ್ಮಿಸಲು ಅವಕಾಶವಿದೆ. ಈ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು, ಮುತವರ್ಜಿ ವಹಿಸಬೇಕಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಇದನ್ನು ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT