ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ: ಕಾಂಡ್ಲಾವನದೊಳಗೆ ಕಯಾಕಿಂಗ್ ಸಾಹಸ ಯಾನ

ಸಾಲಿಗ್ರಾಮದ ಪಾರಂಪಳ್ಳಿ ಬಳಿಯ ಸೀತಾನದಿಯ ಹಿನ್ನೀರಿನಲ್ಲಿ ಕಯಾಕಿಂಗ್‌
Last Updated 9 ಜನವರಿ 2022, 3:41 IST
ಅಕ್ಷರ ಗಾತ್ರ

ಉಡುಪಿ: ಸುಂದರ ಕಡಲ ಕಿನಾರೆಗಳು, ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಕೇರಳ ಮಾದರಿಯ ಹಿನ್ನೀರು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನದಿ ಹಾಗೂ ಸಮುದ್ರ ಸೇರುವ ಸುಂದರ ತಾಣಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಕುಂದಾಪುರ ತಾಲ್ಲೂಕು ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಬಳಿಯ ಸೀತಾನದಿಯ ಹಿನ್ನೀರಿನಲ್ಲಿ ಉತ್ಸಾಹಿ ಯುವಕರಾದ ಲೋಕೇಶ್ ಹಾಗೂ ಮಿಥುನ್‌ ಕಯಾಕಿಂಗ್ ಸಾಹಸ ಕ್ರೀಡೆ ಶುರುಮಾಡಿದ್ದಾರೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಆರಂಭಿಸಿರುವ ಕಯಾಕಿಂಗ್‌ಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಪ್ರವಾಸಿಗರು ದಟ್ಟವಾದ ಕಾಂಡ್ಲಾವನದ ಹಿನ್ನೀರಿನಲ್ಲಿ ಕಯಾಕಿಂಗ್ ನಡೆಸುತ್ತ ಪ್ರಕೃತಿಯ ಸೊಬಗನ್ನು ಆಸ್ವಾದಿಸಬಹುದು. ಜತೆಗೆ ಕಾಂಡ್ಲಾವನದ ಬಗ್ಗೆಯೂ ಮಾಹಿತಿ ಪಡೆಯಬಹುದು ಎನ್ನುತ್ತಾರೆ ಮಿಥುನ್‌.

ಸಂಜೆ ಹಾಗೂ ಬೆಳಗಿನ ಹೊತ್ತು ಕಯಾಕಿಂಗ್‌ಗೆ ಬಂದರೆ ಕಾಂಡ್ಲಾವನದೊಳಗೆ ಗೂಡು ಕಟ್ಟಿಕೊಂಡಿರುವ ಹಕ್ಕಿಗಳ ಚಿಲಿಪಿಲಿ ಸದ್ದು ಆಲಿಸಬಹುದು. ಮನಸ್ಸಿಗೆ ಬಹಳ ಮುದ ನೀಡುವ, ಆಹ್ಲಾದಕರ ವಾತಾವರಣದ ಹಿತವನ್ನೂ ಅನುಭವಿಸಬಹುದು ಎನ್ನುತ್ತಾರೆ ಮಿಥುನ್‌

ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. ಕಯಾಕಿಂಗ್ ಮಾಡುವ ಪ್ರತಿಯೊಬ್ಬರಿಗೂ ಲೈಫ್‌ ಜಾಕೆಟ್‌ ನೀಡಲಾಗುತ್ತದೆ. ಜತೆಗೆ, ಕಯಾಕಿಂಗ್ ಸಾಗುವ ಮಾರ್ಗದಲ್ಲಿ ಲೈಫ್‌ ಗಾರ್ಡ್ಸ್‌ ಇರುವುದರಿಂದ ಭಯಪಡಬೇಕಿಲ್ಲ. 10 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್‌ ಅಗತ್ಯವಿಲ್ಲ. ಮಕ್ಕಳು ಪೋಷಕರೊಂದಿಗೆ ಬಂದರೆ ಮಾತ್ರ ಕಯಾಕಿಂಗ್‌ಗೆ ಅನುಮತಿ ನೀಡಲಾಗುವುದು.

ಹೊಳೆಯ ಆಳ ಮೂರ್ನಾಲ್ಕು ಅಡಿ ಮಾತ್ರ ಇರುವುದರಿಂದ ಆಯತಪ್ಪಿ ಬಿದ್ದರೂ ಆತಂಕ ಪಡಬೇಕಾಗಿಲ್ಲ. ಲೈಫ್‌ ಗಾರ್ಡ್‌ ಸಿಬ್ಬಂದಿಯೂ ಜತೆಗಿರುತ್ತಾರೆ. ಸುಮಾರು 8 ಕಿ.ಮೀ.ವರೆಗೂ ಹಿನ್ನೀರಿನಲ್ಲಿ ಕಯಾಕಿಂಗ್ ಮಾಡುವ ಅವಕಾಶವಿದ್ದು, ಕಾಂಡ್ಲಾವನದ ಸೌಂದರ್ಯವನ್ನು ತೀರಾ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.

ಕಯಾಕಿಂಗ್‌ಗೆ ಪ್ರವಾಸಿಗರಿಂದ ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದ್ದು, ಉಡುಪಿ, ಮಣಿಪಾಲದಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಜಿಲ್ಲೆಗೆ ಪ್ರವಾಸ ಬರುವವರೂ ಬರುತ್ತಿದ್ದು ಕಯಾಕಿಂಗ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಪ್ರವಾಸಿಗರು ಕರಾವಳಿಯ ಬೀಚ್‌ಗಳ ಸೌಂದರ್ಯ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವುದರ ಜತೆಗೆ ಹಿನ್ನೀರಿನ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಬಹುದು. ಕಯಾಕಿಂಗ್ ಸಾಹಸಯಾನಗಳಲ್ಲಿ ಪಾಲ್ಗೊಂಡು ವಿಭಿನ್ನ ಅನುಭವ ಪಡೆಯಬಹುದು ಎಂದರು ಮಿಥುನ್.

ಪ್ರವಾಸಿಗರಿಗೆ ಕೈಗೆಟುಕುವ ದರ
ಹಿನ್ನೀರಿನ ಸೌಂದರ್ಯ ಸವಿಯಲು ರಾಜ್ಯದ ಪ್ರವಾಸಿಗರು ಹೆಚ್ಚಾಗಿ ಗೋವಾ, ಕೇರಳಕ್ಕೆ ಹೋಗುತ್ತಾರೆ. ಅಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕರಾವಳಿಯಲ್ಲಿ ಕಯಾಕಿಂಗ್ ಆರಂಭಿಸಲಾಗಿದೆ. ಕೇರಳದಲ್ಲಿ ಕಯಾಕಿಂಗ್‌ಗೆ ಪ್ರವಾಸಿಗರು ಹೆಚ್ಚು ಹಣ ವ್ಯಹಿಸಬೇಕು. ಆದರೆ, ಇಲ್ಲಿ ಕೇವಲ ₹ 300 ದರ ವಿದೆ. ಸಮಯವೂ ಉಳಿಯಲಿದೆ, ಪ್ರವಾಸಿಗರ ಜೇಬಿಗೂ ಹೊರೆಯಾಗುವುದಿಲ್ಲ ಎನ್ನುತ್ತಾರೆ ಮಿಥುನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT