ಶುಕ್ರವಾರ, ಅಕ್ಟೋಬರ್ 23, 2020
27 °C
ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯರ ಶ್ರಮ

ಉಡುಪಿ: ಕೋವಿಡ್ ಸೋಂಕಿತ 50 ಗರ್ಭಿಣಿಯರಿಗೆ ಹೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ 50 ಗರ್ಭಿಣಿಯರಿಗೆ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಮೇ 27ರಿಂದ ಅ.3ರವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ದಾಖಲಾಗಿದ್ದ 50 ಕೋವಿಡ್‌ ಸೋಂಕಿತ ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

ನವಜಾತ ಶಿಶುಗಳಿಗೆ ಕೋವಿಡ್ ಸೋಂಕು ತಗುಲುವ ಅಪಾಯ ಹೆಚ್ಚಿದ್ದು, ಶಿಶುವಿಗೆ ಸೋಂಕು ತಗುಲದಂತೆ ಆಸ್ಪತ್ರೆಯ ಸಿಬ್ಬಂದಿ ಬಹಳ ಎಚ್ಚರಿಕೆ ವಹಿಸಿತ್ತು. ತಾಯಿ ಮತ್ತು ಮಗುವನ್ನು ಆರೋಗ್ಯವಾಗಿರಿಸಲು ಹಾಗೂ ಸೋಂಕಿನಿಂದ ಮುಕ್ತಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪರಿಣಾಮ, ಜನಿಸಿದ ಎಲ್ಲ ಶಿಶುಗಳು ಆರೋಗ್ಯವಾಗಿವೆ ಎಂದು ತಿಳಿಸಿದೆ.

‘ಶಿಶುಗಳನ್ನು ಮಕ್ಕಳ ವಿಭಾಗದ ಸಿಬ್ಬಂದಿ ಜಾಗರೂಕತೆಯಿಂದ ನೋಡಿಕೊಂಡಿದ್ದಾರೆ. ನವಜಾತ ಶಿಶು ಹಾಗೂ ತಾಯಂದಿರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೋವಿಡ್‌ ಪರಿಣಾಮ ಬೀರದಂತೆ  ಎಚ್ಚರ ವಹಿಸಲಾಗಿತ್ತು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಕೆ. ಭಟ್‌ ತಿಳಿಸಿದ್ದಾರೆ.

‘ತಾಯಿ, ಮಗು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಕಟ್ಟುನಿಟ್ಟಾಗಿ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಪರಿಣಾಮ ಎಲ್ಲ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಇದರ ಹಿಂದೆ ವೈದ್ಯರ ಹಾಗೂ ಸಿಬ್ಬಂದಿ ಶ್ರಮ ಹೆಚ್ಚಿದೆ’ ಎಂದು ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್‌ ಉಮಾಕಾಂತ್ ತಿಳಿಸಿದ್ದಾರೆ.

ಕೋವಿಡ್ ನಿಯಮಾವಳಿಗಳ ಪ್ರಕಾರ ರೋಗಿಗಳನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರದ ಬೆಂಬಲದೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಮೀಸಲಿಡಲಾಗಿದೆ ಎಂದರು.

ಆಸ್ಪತ್ರೆಯಲ್ಲಿರುವ ಸೌಲಭ್ಯ: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯು 150 ಹಾಸಿಗೆಗಳನ್ನು ಒಳಗೊಂಡಿದ್ದು, ಕೋವಿಡ್  ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಲ್ಲಿ 8 ತೀವ್ರ ನಿಗಾ ಘಟಕಗಳು, 10 ಎಚ್‌ಡಿಯು ಹಾಸಿಗೆಗಳು, 50 ಹಾಸಿಗೆಗಳ ಖಾಸಗಿ ಕೊಠಡಿಗಳು ಮತ್ತು 82 ಸಾಮಾನ್ಯ ವಾರ್ಡ್‌ ಹಾಸಿಗೆಗಳ ಸೌಲಭ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.