ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರ | ಕೊರಗ ಸಮುದಾಯದವರಿಗೆ ಭೂಮಿ ನೀಡಲು ಸಭೆ

ಕೊರಗರಿಗೆ ಭೂಮಿ ನೀಡಲು ಅಭಿಯಾನ ನಡೆಸಲು ಶಾಸಕ ಕಿರಣ್ ಕೊಡ್ಗಿ ಸಲಹೆ
Published : 20 ಆಗಸ್ಟ್ 2024, 15:48 IST
Last Updated : 20 ಆಗಸ್ಟ್ 2024, 15:48 IST
ಫಾಲೋ ಮಾಡಿ
Comments

ಕುಂದಾಪುರ: ಕೊರಗ ಸಮುದಾಯದವರಿಗೆ ಭೂಮಿ ನೀಡಲು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸಿ ಅರಣ್ಯ ಇಲಾಖೆ ವಿಶೇಷ ಅಭಿಯಾನ ನಡೆಸಿ, ಜಂಟಿ ಸರ್ವೆ ನಡೆಸಿ, ಹಕ್ಕುಪತ್ರ ನೀಡಬೇಕು ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕೊರಗ ಸಮುದಾಯದವರಿಗೆ ಭೂಮಿ ನೀಡುವ ಕುರಿತು ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆಸಿದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಭೂಮಿ ನೀಡಲು ಇರುವ ಪರಿಹಾರೋಪಾಯಗಳ ಕುರಿತು ಮಾಹಿತಿ ನೀಡಿದಲ್ಲಿ ಸರ್ಕಾರದ ಹಂತದಲ್ಲಿ ಮಾತನಾಡುತ್ತೇನೆ. ಅನೇಕ ವರ್ಷಗಳಿಂದ ನಿರ್ದಿಷ್ಟ ಭೂಮಿಯಲ್ಲಿ ವಾಸ್ತವ್ಯ ಹಾಗೂ ಕೃಷಿ ಮಾಡುತ್ತಿದ್ದರೂ, ಅವರ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಮನೆ ಮಂಜೂರಾಗಿದ್ದರೂ, ಜಾಗದ ಹಕ್ಕುಪತ್ರ ಇಲ್ಲದೇ ಇರುವುದರಿಂದ ಇತರ ಸವಲತ್ತು ಹಾಗೂ ಸಾಲ ಪಡೆದುಕೊಳ್ಳಲು ಆಗುತ್ತಿಲ್ಲ. ಹಿಂದೆ ಅಕ್ರಮ ಸಕ್ರಮದಲ್ಲಿ ನೀಡಿದ ಅರ್ಜಿಗಳನ್ನು ಡೀಮ್ಡ್ ಅರಣ್ಯ ಎಂದು ತಿರಸ್ಕರಿಸಲಾಗಿದೆ. ಹೊಸದಾಗಿ ಜಾಗ ಮಂಜೂರಾತಿಗೆ ಹಿಂದಿನ ಅರ್ಜಿಗಳನ್ನೆ ಪರಿಗಣಿಸಿ ಮರುಪರಿಶೀಲನೆ ಮಾಡಿ ಅರಣ್ಯ ಇಲಾಖೆ ಅಭಿಪ್ರಾಯ ನೀಡಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾತನಾಡಿ, ‘ಮೀಸಲು ಅರಣ್ಯ ಹಾಗೂ ವನ್ಯಜೀವಿ ಅರಣ್ಯದಲ್ಲಿ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ನೀಡಲು ಅವಕಾಶ ಇದೆ. ಡೀಮ್ಡ್ ಅರಣ್ಯವನ್ನು ಮರುಪರಿಶೀಲನೆಗೆ ಒಳಪಡಿಸಲಾಗಿದ್ದು ಈಗ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮೂಲಕ ಅರಣ್ಯ ವಿರಹಿತಗೊಳಿಸಿ ಅಂತಹ ಜಾಗವನ್ನು ಅಕ್ರಮ–ಸಕ್ರಮ ಮೂಲಕ ನೀಡಲು ಅವಕಾಶ ಇರುವುದರಿಂದ ಈ ರೀತಿಯ ಪ್ರಕರಣಗಳನ್ನೂ ಮರುಪರಿಶೀಲಿಸಿ ಮಂಜೂರಿಗೆ ಅಭ್ಯಂತರ ಇಲ್ಲ ಎಂದು ಪ್ರಮಾಣಪತ್ರ ನೀಡಲಾಗುವುದು’ ಎಂದರು.

ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ಕೊರಗ ಸಂಘಟನೆಯ ಗಣೇಶ ಕೊರಗ ಕುಂಭಾಶಿ, ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ನೀಡಿದರೆ ಅದರಿಂದ ಸರ್ಕಾರದ ಯಾವುದೇ ಸವಲತ್ತು ಹಾಗೂ ಬ್ಯಾಂಕ್ ಸಾಲ ಕೂಡಾ ದೊರೆಯುವುದಿಲ್ಲ. ಈ ಕಾರಣಕ್ಕಾಗಿ ದರಖಾಸ್ತು ಭೂಮಿ ನೀಡುವಂತೆ, ಅಕ್ರಮ ಸಕ್ರಮ ಕಾಯ್ದೆಯಡಿಯಲ್ಲಿಯೇ ನೀಡಬೇಕು ಎಂದು ಆಗ್ರಹಿಸಿದರು.

ಕುಮಾರದಾಸ್ ಹಾಲಾಡಿ, ಕೊರಗರ ಭೂಮಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಹಕ್ಕುಪತ್ರ ನೀಡಬೇಕು ಎಂದರು. ನಾಗರಾಜ್ ಕೊರಗ ಕುಂದಾಪುರ ಹಾಗೂ ಪುರಸಭೆ ಸದಸ್ಯ ಪ್ರಭಾಕರ ವಿ. ಅವರು, ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ಕಾಲನಿಯಲ್ಲಿ ಪರಂಬೋಕು ಸಮಸ್ಯೆಯಿಂದಾಗಿ ಇನ್ನೂ ಹಲವು ಕೊರಗ ಕುಟುಂಬಗಳಿಗೆ ಹಕ್ಕುಪತ್ರ ಲಭಿಸಿಲ್ಲ ಎನ್ನುವುದನ್ನು ಸಭೆಯ ಗಮನಕ್ಕೆ ತಂದರು. ಹಾರ್ದಳ್ಳಿ ಮಂಡಳ್ಳಿಯ ಗಿರಿಜಾ, ಕೊರಗ ಭೂಮಿಗೆ ಕಾಯ್ದೆ ಇದ್ದರೂ ಪುಸ್ತಕಗಳಲ್ಲಷ್ಟೇ ಇದೆ ವಿನಾ ಜಾರಿಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಇದ್ದರು.

Quote - ಅನೇಕ ಸಮಯದಿಂದ ನನೆಗುದಿಗೆ ಬಿದ್ದಿದ್ದ ಕೊರಗ ಸಮುದಾಯದವರ ಜಾಗದ ಸಮಸ್ಯೆಗಳಿಗೆ ಪರಿಹಾರ ನೀಡಲು ಶಾಸಕರ ಸೂಚನೆಯಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸಭೆ ಕರೆಯಲಾಗಿದೆ ಎಚ್.ಎಸ್.ಶೋಭಾಲಕ್ಷ್ಮಿ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT