ಶನಿವಾರ, ಮೇ 21, 2022
25 °C
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

ಕೊರಗರ ವಿಶೇಷ ಮೀಸಲಾತಿ ಬೇಡಿಕೆಗೆ ಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪರಿಶಿಷ್ಟ ಪಂಗಡಕ್ಕೆ ನಿಗಧಿಯಾಗಿರುವ ಶೇ 7.5ರ ಮೀಸಲಾತಿಯಲ್ಲಿ ಕೊರಗ ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊರಗರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕು ಎಂಬ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಕೊರಗ ಕ್ರೀಡೋತ್ಸವಕ್ಕೆ ಉದ್ಘಾಟಿಸಿ ಮಾತನಾಡಿದ ಅವರು, ಕೊರಗರ ಮುಂದಿನ ಪೀಳಿಗೆ ಸ್ವಾಭಿಮಾನದಿಂದ ತಲೆ ಎತ್ತಿ ಬದುಕಬೇಕಾದರೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಾದರೆ ಸಮುದಾಯ ಶಿಕ್ಷಣ ಪಡೆಯುವತ್ತ ಹೆಜ್ಜೆ ಹಾಕಬೇಕು. ಕೊರಗ ಜನಾಂಗದ ಕಟ್ಟಕಡೆಯ ವ್ಯಕ್ತಿ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಕೊರಗ ಕ್ರೀಡೋತ್ಸವ ಸ್ವಾಭಿಮಾನದ ಸಂಕೇತವಾಗಿ ಮೂಡಿ ಬರಲಿ, ಅತ್ಯುತ್ತಮ ಕ್ರೀಡಾಪಟುಗಳು ರೂಪುಗೊಳ್ಳಲಿ. ಈ ಬಾರಿಯ ಕ್ರೀಡೋತ್ಸವಕ್ಕೆ ಸರ್ಕಾರ ₹ 60 ಲಕ್ಷ ನೀಡಿದೆ. ಮುಂದಿನ ವರ್ಷದ ಕ್ರೀಡೋತ್ಸವಕ್ಕೆ 2 ಪಟ್ಟು ಹೆಚ್ಚು ಅನುದಾನ ಮೀಸಲಿರಿಸುವುದಾಗಿ ಕೋಟ ಭರವಸೆ ನೀಡಿದರು.

ಹಿಂದೆ ಎಚ್‌.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಉಡುಪಿಯಲ್ಲಿರುವ ಕೊರಗರಿಗೆ ಭೂಮಿ ಹಾಗೂ ವಸತಿ ನೀಡುವಂತೆ ಒತ್ತಾಯಿಸಿದ್ದೆ. ಅದರಂತೆ 136 ಕುಟುಂಬಗಳಿಗೆ ನಿರ್ಮಿತಿ ಕೇಂದ್ರದ ಮೂಲಕ ₹ 5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಒಪ್ಪಿಗೆ ಸೂಚಿಸಿದ್ದರು. ಬಳಿಕ ಅವರ ಸಚಿವ ಸ್ಥಾನ ಹೋಗಿದ್ದರಿಂದ ಕೊರಗರಿಗೆ ಮನೆಗಳನ್ನು ಕಟ್ಟಿಸಿಕೊಡಲು ಸಾಧ್ಯವಾಗಿರಲಿಲ್ಲ.

ಈಗ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನನಗೆ ಸಿಕ್ಕಿದ್ದು, ಶೀಘ್ರವೇ ಮನೆ ಇಲ್ಲದ ಕೊರಗರಿಗೆ ಮನೆ ಕಟ್ಟಿಸಿಕೊಡಲಾಗುವುದು. ಮನೆ ಕಟ್ಟಿಕೊಳ್ಳಲು ಸರ್ಕಾರ ನಿಗದಿಮಾಡಿರುವ ಅನುದಾನವನ್ನು ಹೆಚ್ಚಿಸಲಾಗುವುದು. ಕೊರಗರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಪೌರಾಯುಕ್ತ ಉದಯ್‌ ಕುಮಾರ್ ಶೆಟ್ಟಿ, ಐಟಿಡಿಪಿ ಇಲಾಖೆ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಸುರೇಶ್ ಬಗ್ವಾಡಿ, ಕೊರಗ ಮುಖಂಡರಾದ ಗಣೇಶ್ ಬಾರ್ಕೂರು, ಬಾಲರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.