ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಗ್ರಾಮಸಭೆ

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಗ್ರಾಮಸಭೆ
Last Updated 4 ಜುಲೈ 2022, 7:22 IST
ಅಕ್ಷರ ಗಾತ್ರ

ಕೋಟ: ಕೋಟ ಸಮುದಾಯ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ರಾತ್ರಿ ಪಾಳಿಗೆ ಹೆರಿಗೆ ತಜ್ಞರ ನೇಮಕ, ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಕಲುಷಿತ ನೀರು ಸಮುದ್ರಕ್ಕೆ, ಹಂದಟ್ಟಿನಲ್ಲಿ ನಡೆದ ಕಳಪೆ ಕಾಮಗಾರಿಯ ರಸ್ತೆ ಹೀಗೆ ಕೋಟತಟ್ಟು ಗ್ರಾಮದ ಅನೇಕ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಗಮನ ಸೆಳೆದರು.

ಪಂಚಾಯಿತಿ ಸದಸ್ಯ ರಂಜಿತ್‌ ಕುಮಾರ್‌ ‘ಕೋಟತಟ್ಟು ಭಾಗದಲ್ಲಿ ಖಾಯಂ ಆಗಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಮತ್ತು ಪಡುಕೆರೆ ಭಾಗದಲ್ಲಿ ಆರಂಭಗೊಂಡ ಉಪ ಆರೋಗ್ಯ ಕೇಂದ್ರದಲ್ಲಿ ವಾರದ ಎಲ್ಲ ದಿನಗಳಲ್ಲಿ ಆರೋಗ್ಯ ನಿರೀಕ್ಷಕರನ್ನು ನೇಮಿಸಬೇಕು’ ಎಂದು ಮನವಿ ಮಾಡಿದರು.

ಕೋಟ ಸಮುದಾಯ ಆರೋಗ್ಯ ಕೇಂದ್ರ ಹೆರಿಗೆ ಆಸ್ಪತ್ರೆಯಾಗಿ ರೂಪುಗೊಂಡಿದ್ದು, ರಾತ್ರಿ ವೇಳೆ ಸಮರ್ಪಕವಾಗಿ ಹೆರಿಗೆ ತಜ್ಞರ ಕೊರತೆ ಎದುರಿಸುತ್ತಿದೆ. ಈ ಬಗ್ಗೆ ಇಲಾಖೆ ಮುತುವರ್ಜಿ ವಹಿಸಿ ರಾತ್ರಿ ಹೊತ್ತು ವೈದ್ಯರ ನೇಮಕಗೊಳಿಸುವಂತೆ ಒತ್ತಾಯಿಸಿದರು.

ಕೋಟ ಪಡುಕೆರೆಯ ಸಿಆರ್‌ಝಡ್ ವ್ಯಾಪ್ತಿಯ ಸಮುದ್ರ ಕಿನಾರೆಗೆ ಕಲುಷಿತ ನೀರು ಬಿಡುವ ವಿಚಾರದ ಬಗ್ಗೆ ಸದಸ್ಯ ಯೋಗೇಂದ್ರ ಪುತ್ರನ್ ಸಿಆರ್‌ಝಡ್ ಇಲಾಖಾ ಅಧಿಕಾರಿ ಸವಿತಾ ಕಾದ್ರಿ ಅವರನ್ನು ತರಾಟೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಹಂದಟ್ಟು ಭಾಗದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಿಸಿದ ಒಂದೇ ವರ್ಷದಲ್ಲಿ ರಸ್ತೆ ಹೊಂಡಗಳಿಂದ ಹಾನಿಯಾಗಿದೆ. ಈ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ವಾರ್ಡ್‌ ಸದಸ್ಯ ಪ್ರಕಾಶ್ ಹಂದಟ್ಟು ಕೆಆರ್‌ಐಡಿ ವತಿಯಿಂದ ನಿರ್ಮಿಸಲಾದ ಈ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಪಂಚಾಯಿತಿ ದೂರು ನೀಡಲಾಗಿದೆ. ರಸ್ತೆ ಪುನರ್ ನಿರ್ಮಿಸಿಕೊಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.

ನೋಡಲ್ ಅಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ ಗ್ರಾಮಸಭೆಯ ಮಹತ್ವವನ್ನು ತಿಳಿಸಿದರು.

ಉಪಾಧ್ಯಕ್ಷ ವಾಸು ಪೂಜಾರಿ, ಮೀನುಗಾರಿಕಾ ಇಲಾಖೆಯ ನಾಗರಾಜ್, ಕೃಷಿ ಇಲಾಖೆಯ ಸುಪ್ರಭಾ, ಮೆಸ್ಕಾಂ ಎಂಜಿನಿಯರ್‌ ಪ್ರಶಾಂತ್ ಶೆಟ್ಟಿ, ಗ್ರಾಮಲೆಕ್ಕಿಗ ಚೆಲುವರಾಜ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೀನಾಕ್ಷಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ್, ಕೋಟ ಪೊಲೀಸ್ ಠಾಣೆಯ ಎಎಸ್‌ಐ ಗಣೇಶ್ ಪೈ ಇದ್ದರು.

ಅಭಿವೃದ್ಧಿ ಅಧಿಕಾರಿ ಜಯರಾಂ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ಶಕೀಲ ವರದಿ ಮಂಡಿಸಿದರು. ಪಂಚಾಯಿತಿ ಕಾರ್ಯದರ್ಶಿ ಶೇಖರ್ ಮರವಂತೆ ನಡಾವಳಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.

ಸಿಆರ್‌ಝಡ್ ಸಮಸ್ಯೆ

ಕರಾವಳಿ ಭಾಗದಲ್ಲಿ ಸಿಆರ್‌ಝಡ್ ಸಮಸ್ಯೆ ಹೆಚ್ಚಿದೆ. ಇದರಿಂದ ಈ ಭಾಗದಲ್ಲಿ ಮನೆ ಅಥವಾ ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸಿಕೊಡುವಂತೆ ನಿತಿನ್‌ ಪಡುಕೆರೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT