ಶನಿವಾರ, ಜುಲೈ 2, 2022
22 °C

ಕುಂದಾಪುರ: ಮಾಲಾಡಿಯಲ್ಲಿ ಮತ್ತೊಂದು ಚಿರತೆ ಬೋನಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ತಾಲ್ಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿನ ತೋಟವೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಹೆಣ್ಣು ಚಿರತೆ ಗುರುವಾರ ಬಿದ್ದಿದೆ.

ಮಾಲಾಡಿಯ ನಂದಿಕೇಶ್ವರ ದೇವಸ್ಥಾನದ ಪರಿಸರದಲ್ಲಿ ಚಿರತೆಯ ಓಡಾಟ ಇದೆ ಎನ್ನುವ ಸಾರ್ವಜನಿಕ ಮಾಹಿತಿಯ ಹಿನ್ನೆಲೆಯಲ್ಲಿ ಕುಂದಾಪುರ ಅರಣ್ಯ ಉಪ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು.

ದೇವಸ್ಥಾನದ ಸಮೀಪದ ತೋಟವೊಂದರಲ್ಲಿ ತಿಂಗಳಿಂದ ಬೋನನ್ನು ಇಟ್ಟು, ಅದರಲ್ಲಿ ನಾಯಿಯನ್ನು ಕಟ್ಟಿಹಾಕಿ ಚಿರತೆಗಾಗಿ ಬಲೆ ಬೀಸಿದ್ದರು. ಸುಮಾರು 2.5 ವರ್ಷದ ಹೆಣ್ಣು ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. ಗುರುವಾರ ಬೆಳಿಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಅದನ್ನು ರಕ್ಷಣೆ ಮಾಡಿ ಕುಂದಾಪುರಕ್ಕೆ ಕೊಂಡೊಯ್ದಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಪ್ರತಿದಿನ ಬೋನಿನಲ್ಲಿ ನಾಯಿಯನ್ನು ಕಟ್ಟಿ ಹಾಕುವಲ್ಲಿ ಹಾಗೂ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸಾಥ್ ನೀಡಿದ್ದಾರೆ. ಉಪ ವಲಯಾರಣ್ಯಾಧಿಕಾರಿ ಉದಯ್, ಸಿಬ್ಬಂದಿ ಸೋಮಶೇಖರ್, ಉದಯ್, ಅಶೋಕ ಇದ್ದರು.

ನಾಲ್ಕು ವರ್ಷ– ಐದು ಚಿರತೆ ಸೆರೆ: ಸುತ್ತಮುತ್ತಲೂ ಅರಣ್ಯ ಹಾಗೂ ತೋಟವನ್ನು ಹೊಂದಿರುವ ಮಾಲಾಡಿಯಲ್ಲಿ ಕೆಲ ವರ್ಷಗಳಿಂದ ಆಗ್ಗಾಗ್ಗೆ ಚಿರತೆ ಕಾಣಿಸಿಕೊಂಡು ಸುದ್ದಿಯಾಗುತ್ತಿತ್ತು. ಅಂಗನವಾಡಿ, ಶಾಲೆ ಸೇರಿದಂತೆ ಜನವಸತಿ ಪ್ರದೇಶವನ್ನು ಹೊಂದಿರುವ ಈ ಪ್ರದೇಶದಲ್ಲಿ ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿ ಕಾಣಿಸಿಕೊಂಡಿತ್ತು. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿರುವುದು ಸುದ್ದಿಯಾಗಿತ್ತು. ಗುರುವಾರ ಕಾರ್ಯಾಚರಣೆ ನಡೆಸಿದ್ದ ತೋಟದಲ್ಲಿಯೇ 2018 ಆಗಸ್ಟ್ ತಿಂಗಳಲ್ಲಿಯೂ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೇ ಭಾಗದಲ್ಲಿ 2019ರ ಅ.6, ಡಿ.12 ಹಾಗೂ ಡಿ.24ರಲ್ಲಿ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 5 ಚಿರತೆಗಳನ್ನು ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು