ಕುಂದಾಪುರ: ‘ಗಣಿತ, ಸಂಖ್ಯಾಶಾಸ್ತ್ರ ಕಬ್ಬಿಣದ ಕಡಲೆಯಂತೆ ಎಂಬ ತಪ್ಪು ಗ್ರಹಿಕೆ ವಿದ್ಯಾರ್ಥಿಗಳಲ್ಲಿದೆ. ಯುವ ಪೀಳಿಗೆಗೆ ಎಲ್ಲಾ ಸಂದರ್ಭಗಳಲ್ಲಿಯೂ ಅನೇಕ ವ್ಯವಹಾರಗಳಲ್ಲಿ ಮತ್ತು ಸಂವಹನಗಳಲ್ಲಿ ಸಂಖ್ಯಾಶಾಸ್ತ್ರ ಅವಶ್ಯಕವಾಗಿದೆ’ ಎಂದು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಸಂಖ್ಯಾಶಾಸ್ತ್ರ ಉಪನ್ಯಾಸಕರ ವೇದಿಕೆ ಆಶ್ರಯದಲ್ಲಿ ಸಂಖ್ಯಾಶಾಸ್ತ್ರ ಬೋಧಕರಿಗಾಗಿ ಏರ್ಪಡಿಸಿದ್ದ ‘ಒಂದು ದಿನದ ಬೋಧನಾ ಕೌಶಲ ಪುನಃಶ್ಚೇತನ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ಸಂಯೋಜನೆ ಅವಶ್ಯಕತೆಯಿದೆ. ಇಡೀ ಜಗತ್ತಿನ ಆರ್ಥಿಕ ಬಲವರ್ಧನೆಯ ಅಧ್ಯಯನ ಕೂಡಾ ಇದರಿಂದಲೇ ಸಾಧ್ಯವಾಗಿರುವುದರಿಂದ ಸಂಖ್ಯಾಶಾಸ್ತ್ರ ರಾಷ್ಟ್ರದ ಅಭ್ಯುದಯದ ಪ್ರತೀಕವಾಗಿದೆ ಎಂದರು.
ಪ್ರಾಚಾರ್ಯ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ರಾಜಮೋಹನ್ ಹಾಗೂ ಪ್ರೊ. ವಿಷ್ಣುಮೂರ್ತಿ ಉಪಾಧ್ಯಾಯ ಮಾತನಾಡಿದರು. ಪ್ರೊ.ಗಣೇಶ ಕೆ., ‘ಆರ್-ಪ್ರೊಗ್ರಾಮಿಂಗ್’ ವಿಷಯವಾಗಿ ಮತ್ತು ಪ್ರೊ.ಪ್ರಭಾಕರ ಶೆಟ್ಟಿಗಾರ, ‘ಪ್ರಶ್ನೆ ಪತ್ರಿಕೆಯ ನೀಲನಕ್ಷೆಯ’ ಕುರಿತು ಮಾಹಿತಿ ನೀಡಿದರು.
ವೈಭವಿ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ. ಪ್ರಭಾಕರ ಶೆಟ್ಟಿಗಾರ ಸ್ವಾಗತಿಸಿದರು. ನೇತ್ರಾವತಿ ಬುಡ್ಡಿ ವಂದಿಸಿದರು. ಶಿಲ್ಪಾ ನಿರೂಪಿಸಿದರು. ಕಾರ್ಯಾಗಾರದಲ್ಲಿ 45 ಜನ ಉಪನ್ಯಾಸಕರು ಭಾಗವಹಿಸಿದ್ದರು.