ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್‌ಗಳಿಗೆ ನಗು ತರಿಸುವ ಶಕ್ತಿ

ಕುಂದಾಪುರದಲ್ಲಿ ಕಾರ್ಟೂನ್ ಹಬ್ಬಕ್ಕೆ ಚಾಲನೆ ನೀಡಿದ ಕಾರ್ತಿಕ್ ಗೌಡ
Last Updated 23 ನವೆಂಬರ್ 2022, 13:09 IST
ಅಕ್ಷರ ಗಾತ್ರ

ಕುಂದಾಪುರ: ಸಮಸ್ಯೆ, ಸಂಕಷ್ಟ, ಬೇಸರ, ದುಃಖ ಸೇರಿದಂತೆ ಬದುಕಿನ ಯಾವುದೇ ಸಂದರ್ಭದಲ್ಲೂ ನೋವನ್ನು ತಣಿಸಿ, ನಗುವನ್ನು ತರಿಸುವ ಶಕ್ತಿ ಇರುವುದು ಕಾರ್ಟೂನ್‌ಗಳಿಗೆ ಮಾತ್ರ ಎಂದು ಚಲನಚಿತ್ರ ನಿರ್ಮಾಪಕ, ಹೊಂಬಾಳೆ ಫಿಲ್ಮ್ಸ್‌ನ ಕಾರ್ತಿಕ್ ಗೌಡ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಇಲ್ಲಿನ ಕಾರ್ಟೂನ್ ಬಳಗದ ವತಿಯಿಂದ ಆಯೋಜಿಸಿದ್ದ ‘ಕಾರ್ಟೂನ್ ಹಬ್ಬ-2022’ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಜೀವನದಲ್ಲಿ ಸಂತೋಷವನ್ನು ತರುವ ಕೆಲಸವನ್ನು ವ್ಯಂಗ್ಯಚಿತ್ರಕಾರರು ಮಾಡುತ್ತಾರೆ. ನಿರಂತರ 10 ವರ್ಷಗಳ ಕಾಲ ಕಾರ್ಟೂನ್ ಹಬ್ಬವನ್ನು ಸಂಘಟಿಸುವುದು ಕೂಡ ಒಂದು ಸಾಧನೆಯೇ ಆಗಿದೆ. ಈ ಹಬ್ಬ 100 ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದರು.

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರ ‘ಗೋ ಕೊರೊನಾ ಗೋ‘ ಸಂಚಿಕೆ 2 ಅನ್ನು ಅನಾವರಣಗೊಳಿಸಿ ಮಾತನಾಡಿದ ವ್ಯಂಗ್ಯ ಚಿತ್ರಕಾರ ಜೇಮ್ಸ್ ವಾಜ್ ಮಾತನಾಡಿ, ‘ಚಲನಚಿತ್ರಗಳು ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್ ಆದರೆ, ವ್ಯಂಗ್ಯಚಿತ್ರಗಳ ಸಂಕಲನಗಳು ಪುಸ್ತಕ ಬಿಡುಗಡೆಯ ಮೊದಲೇ ಬ್ಲಾಕ್ ಬಸ್ಟರ್ ಆಗುತ್ತದೆ. ‘ಗೋ ಕೊರೋನಾ ಗೋ’ ಪ್ರಥಮ ಸಂಚಿಕೆಯು ಕೊರೊನಾಕ್ಕೆ ಮೊದಲ ಡೋಸ್ ನೀಡಿದರೆ, ಎರಡನೇ ಆವೃತ್ತಿಯು ಸಣ್ಣ ಸಣ್ಣ ವೈರಸ್‌ಗಳನ್ನು ಓಡಿಸಿದೆ. ಈ ಎರಡು ಆವೃತ್ತಿಗಳು ವ್ಯಂಗ್ಯಚಿತ್ರಕಾರರ ವೃತ್ತಿ ಬದುಕಿಗೆ ಒಳ್ಳೆಯ ಕೈಪಿಡಿಯಾಗಿವೆ. ರಚನೆ, ಬಣ್ಣ ಹಾಕುವುದು, ಸಾಂದರ್ಭಿಕತೆ ವಿವರಿಸುವುದು ಸೇರಿದಂತೆ ಅಗತ್ಯ ಮಾಹಿತಿಗಳ ಆಗರವಾಗಿದೆ ಎಂದರು.

ಪ್ರಗತಿಪರ ಚಿಂತಕ ಶಂಕರ ಕೆಂಚನೂರು ಮಾತನಾಡಿ, ‘ಸತ್ಯವನ್ನು ತಮಾಷೆಯಾಗಿ ಹೇಳುವುದರಿಂದ ಮನ ಮುಟ್ಟುತ್ತದೆ. ವ್ಯಂಗ್ಯಚಿತ್ರಗಳ ಮೂಲಕ ಸಮಾಜಕ್ಕೆ ಕಟು ಸತ್ಯವನ್ನು ತಿಳಿಸುವ ಕೆಲಸವನ್ನು ಕಾರ್ಟೂನ್‌ಗಳು ಮಾಡುತ್ತವೆ. ವ್ಯಂಗ್ಯಚಿತ್ರಗಳಲ್ಲಿನ ಮೊನಚುಗಳಿಂದಾಗಿ ಮಾಧ್ಯಮಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ವೇದಿಕೆ ದೊರಕುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಸ್ತುತ ಕಾಲಘಟ್ಟದ ಬರವಣಿಗೆಯಲ್ಲಿ ದಾಖಲಾತಿಯ ಕೊರತೆ ಕಾಣುತ್ತಿದೆ. ಸತ್ಯ ಹೇಳಲು ಧೈರ್ಯ ಹಾಗೂ ಪ್ರತಿಭೆ ಎರಡು ಬೇಕು. ಸತೀಶ್ ಆಚಾರ್ಯ ಅವರಲ್ಲಿ ಈ ಎರಡು ಅಂಶಗಳು ಇವೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡಿ, ‘ಚಳಿಗಾಲದಲ್ಲಿ ಬರುವ ಸಾಲ ಸಾಲು ಹಬ್ಬಗಳ ಸಂಭ್ರಮ ಮರೆಯಾಗುತ್ತಿದೆ. ಆದರೆ ಕುಂದಾಪುರದವರಿಗೆ ಕಳೆದ 9 ವರ್ಷಗಳಿಂದ ಕಾರ್ಟೂನ್ ಹಬ್ಬ ಈ ಸಂಭ್ರಮವನ್ನು ನೀಡುತ್ತಿದೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಹಾಗೂ ನೀಡುತ್ತಿರುವ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಜನರಿಗೆ ಅಗತ್ಯ ಮಾಹಿತಿ ನೀಡುವ ಕಾರ್ಯ ವ್ಯಂಗ್ಯಚಿತ್ರಗಳಿಂದ ಆಗುತ್ತಿದೆ. ದೇಶದ ವರ್ತಮಾನದ ಆಗುಹೋಗುಗಳನ್ನು ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿ, ವಿಮರ್ಶೆ ಮಾಡಿ, ವ್ಯಂಗ್ಯಚಿತ್ರಕಾರರು ಜನರ ಮುಂದಿಡುತ್ತಾರೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ಎ ಪಾಯಸ್, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಇದ್ದರು. ಕಾರ್ಟೂನ್ ಬಳಗದ ಸತೀಶ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ್ ಜೋಸೆಫ್ ನಿರೂಪಿಸಿದರು. ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಕೇಶವ್ ಸಸಿಹಿತ್ಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT