ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಅಳಿವೆಯಲ್ಲಿ ಹೆಚ್ಚಿದ ಕಡಲ್ಕೊರೆತ: ಆತಂಕ

ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸ್ಥಳೀಯರ ಆಗ್ರಹ
Last Updated 18 ಜುಲೈ 2022, 14:15 IST
ಅಕ್ಷರ ಗಾತ್ರ

ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಅಳಿವೆ ಸಮೀಪದ ಕಿನಾರ ಬೀಚ್ ರೆಸ್ಟೋರೆಂಟ್ ಹಾಗೂ ಗೋಪಾಡಿ ಮನೆಯ ಪರಿಸರದಲ್ಲಿ ತೀವ್ರ ಕಡಲ್ಕೊರೆತ ಸಂಭವಿಸಿದ್ದು, ರೆಸ್ಟೋರೆಂಟ್‌ನ ಗುಡಿಸಲುಗಳು ಸಮುದ್ರ ಪಾಲಾಗುತ್ತಿವೆ.

ಈಚೆಗೆ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಕಡಲ ತೀರದಲ್ಲಿರುವ ರಸ್ತೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿವೆ. ತೀರದಲ್ಲಿ ವಾಸವಾಗಿರುವ ಮೀನುಗಾರರು ಆತಂಕದಲ್ಲಿದ್ದಾರೆ.

ತಾಲ್ಲೂಕಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಕೋಡಿ-ಕೋಟೇಶ್ವರ ರಸ್ತೆಯೂ ಅಪಾಯದಂಚಿನಲ್ಲಿದೆ. ಕಡಲ್ಕೊರೆತ ತಡೆಗಾಗಿ ಹಳೆ ಅಳಿವೆ ಕಡಲ ತೀರದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಗಳ ಕಲ್ಲುಗಳು ಸಮುದ್ರ ಪಾಲಾಗಿವೆ. ಸಮುದ್ರ ಪ್ರಕ್ಷುಬ್ಧಗೊಂಡು ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು ಕಡಲ್ಕೊರೆತ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಗಾಳಿ ಹಾಗೂ ಮಳೆಯ ಅಬ್ಬರದಿಂದ ಕಡಲಿನ ಅಲೆಗಳ ಒತ್ತಡ ಹೆಚ್ಚಾಗಿದ್ದು, ತೀರ ಪ್ರದೇಶದ ಸಮೀಪದಲ್ಲಿರುವ ಗೂಡಂಗಡಿಗಳನ್ನು ಅಪೋಷನ ತೆಗೆದುಕೊಳ್ಳುವ ಭೀತಿ ಎದುರಾಗಿದೆ. ಕಡಲ್ಕೊರೆತದಿಂದಾಗಿ ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟಾಗುತ್ತದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಹಲವು ವರ್ಷಗಳಿಂದಲೂ ಪ್ರತಿ ಮಳೆಗಾಲದಲ್ಲಿ ಕಡಲ್ಕೊರೆತ ಸಮಸ್ಯೆಗಳು ಕಂಡು ಬರುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಿನಾರ ರೆಸ್ಟೋರೆಂಟ್ ಬಳಿ ಕಾಣಿಸಿಕೊಳ್ಳುವ ಕಡಲ್ಕೊರೆತದಿಂದ ಮಳೆಗಾಲದಲ್ಲಿ ಸಮಸ್ಯೆಗಳು ಖಾಯಂ ಆಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಸರ್ಕಾರ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಗುತ್ತಿಗೆದಾರರ ಹೊಟ್ಟೆ ತುಂಬಿಸುವ ಬದಲು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT