ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರದರಾಜ ಎಂ.ಶೆಟ್ಟಿ ಕಾಲೇಜು: ಕುಂದಾಪುರ, ಬೈಂದೂರು ವಿದ್ಯಾರ್ಥಿಗಳ ‘ಶಿಕ್ಷಣ ಹಬ್’

Published 11 ಜುಲೈ 2024, 5:19 IST
Last Updated 11 ಜುಲೈ 2024, 5:19 IST
ಅಕ್ಷರ ಗಾತ್ರ

ಕುಂದಾಪುರ: ಕೋಟೇಶ್ವರದಿಂದ ಹಾಲಾಡಿಗೆ ತೆರಳುವ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಿಕ್ಷಣಾರ್ಜನೆ ಮಾಡುವ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಹಬ್‌ನಂತೆ ವಾತಾವರಣವನ್ನು ನೀಡುತ್ತಿದೆ.

2007ರಲ್ಲಿ ಮಂಗಳೂರು ವಿ.ವಿ.ಯ ಶಾಶ್ವತ ಸಂಯೋಜನೆಯೊಂದಿಗೆ 143 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿರುವ ಈ ಕಾಲೇಜಿನಲ್ಲಿ ಇದೀಗ ಬರೊಬ್ಬರಿ 1,451 ವಿದ್ಯಾರ್ಥಿಗಳಿದ್ದಾರೆ.

ಮಂಗಳೂರು ವಿ.ವಿ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಎರಡನೇಯ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸಂಸ್ಥೆ ಎನ್ನುವ ಹಿರಿಮೆ ಇದೆ. ರಾಷ್ಟ್ರೀಯ ಮಾನ್ಯತಾ ಸಂಸ್ಥೆ (ನ್ಯಾಕ್) ಯಿಂದ ಬಿ+ ಮಾನ್ಯತೆ ದೊರಕಿದೆ.

ಅನುಭವಿ ಹಾಗೂ ನಿಷ್ಠಾವಂತ ಬೋಧಕ-ಬೋಧಕೇತರ ವೃಂದ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ. ಮಾರುಕಟ್ಟೆ ಹಾಗೂ ಉದ್ಯೋಗಾವಕಾಶದ ಬೇಡಿಕೆಗೆ ಅನುಗುಣವಾಗಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ ಹಾಗೂ ಬಿ.ಸಿ.ಎ ವಿಭಾಗಗಳಲ್ಲಿ 5 ಪದವಿ ಕೋರ್ಸ್ ಹಾಗೂ ಸ್ನಾತಕೋತ್ತರ ಅಧ್ಯಯನಕ್ಕಾಗಿ ಎಂ.ಕಾಂ ಕೋರ್ಸ್ ಅಳವಡಿಸಿಕೊಳ್ಳಲಾಗಿದೆ. ಬೇರೆ ಬೇರೆ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಇದೆ.

ಆಧುನೀಕತೆಯ ಸ್ಪರ್ಶ :

ಅಂದಾಜು 10 ಎಕ್ರೆ ವಿಸ್ತೀರ್ಣದ ಜಾಗದಲ್ಲಿರುವ ಸುಸಜ್ಜಿತ ಕಟ್ಟಡ ಹಾಗೂ ಮಾಲಿನ್ಯ ರಹಿತ ವಾತಾವರಣ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಪ್ರಶಾಂತ ವಾತಾವರಣ ನಿರ್ಮಿಸಿದೆ. ಎಲ್ಲಾ ತರಗತಿ ಕೊಠಡಿಗಳಲ್ಲಿಯೂ ಪ್ರೊಜೆಕ್ಟರ್ ಹಾಗೂ ಅಡಿಯೋ ಎಡ್ರೆಸಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ತಂತ್ರಜ್ಞಾನದ ಉಪಯೋಗವಾಗಬೇಕು ಎನ್ನುವ ಕಾರಣಕ್ಕಾಗಿ ಇಂಟರ್‌ನೆಟ್‌ ವೈಫೈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಶುಲ್ಕ ಪಾವತಿಯ ಸಮಯದಲ್ಲಿ ವಿದ್ಯಾರ್ಥಿಗಳಿಗಾಗುವ ಅನಾನುಕೂಲವನ್ನು ತಪ್ಪಿಸಲು ಎಸ್.ಬಿ.ಐ. ನೊಂದಿಗೆ ಒಡಂಬಡಿಕೆಯ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ ಆ ಮೂಲಕ ವಲಯ ಮಟ್ಟದಲ್ಲಿ ಪ್ರಪ್ರಥಮ ಇ-ಪಾವತಿ ವ್ಯವಸ್ಥೆ ಮಾಡಿರುವ ಹೆಗ್ಗಳಿಕೆ ಕಾಲೇಜಿಗೆ ಇದೆ

ಆಧುನೀಕತೆ ಹಾಗೂ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ಸುಸಜ್ಜಿತವಾದ ಪ್ರಯೋಗಾಲಯ. ಗಣಕೀಕೃತ ಗ್ರಂಥಾಲಯ, ಎನ್‌ಎಸ್‌ಡಿಎಲ್ ನ್ಯಾಷನಲ್ ಡಿಜಿಟಲ್ ಲೈಬ್ರರಿ ಹಾಗೂ ಸುಸಜ್ಜಿತ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಾಲೇಜಿನ ಕ್ರೀಡಾಂಗಣ ತಾಲ್ಲೂಕಿನ ದೊಡ್ಡ ಕ್ರೀಡಾಂಗಣಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಹೊಂದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೆ ಕೋಟೇಶ್ವರ ಕಾಲೇಜು ಮೈದಾನವೇ ಪ್ರಥಮ ಆದ್ಯತೆ ಎನ್ನುವಷ್ಟರ ಮಟ್ಟಿಗೆ ವಿಶಾಲವಾದ ಕ್ರೀಡಾಂಗಣ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿ ಮಿತ್ರ ಕಾಲೇಜು :

ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಲಾಗುತ್ತಿದ್ದು, ಎನ್.ಎಸ್.ಎಸ್., ರೋವರ್-ರೇಂಜರ್, ರೆಡ್ ಕ್ರಾಸ್, ಕ್ರೀಡೆ ಸೇರಿದಂತೆ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿ ವಿವಿಧ ಕ್ರಿಯಾಶೀಲ ಸಮಿತಿಗಳನ್ನು ರಚಿಸಲಾಗಿದೆ.

ಕಳೆದ ವರ್ಷಗಳಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇಲ್ಲಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಸ್ಪರ್ಧೆಗಳ ಸಿದ್ದತೆ ಹಾಗೂ ಅನುಭವ ಈ ಕಾಲೇಜಿನ ವಿದ್ಯಾರ್ಥಿಗಳಿಗೂ ಆಗಬೇಕು ಎನ್ನುವ ಉದ್ದೇಶವನ್ನು ಇರಿಸಿಕೊಂಡು ಅಂತರ್ ಕಾಲೇಜು ಮಟ್ಟದ ಹಾಗೂ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ.

ಕುಂದಾಪುರದಿಂದ ಹಾಗೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗಾಗಿ ಬಸ್ಸಿನ ವ್ಯವಸ್ಥೆ ಉತ್ತಮವಾಗಿದೆ. ಜಿಲ್ಲೆಯಲ್ಲದೆ, ಉತ್ತರಕನ್ನಡ, ಕೊಪ್ಪಳ, ರಾಯಚೂರು, ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧ್ಯಯನಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸಮೀಪದಲ್ಲಿಯೇ ಇರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆಯ ವಸತಿ ನಿಲಯಗಳಲ್ಲಿ ಅವಕಾಶ ದೊರಕುತ್ತಿದೆ. ಖಾಸಗಿ ವಸತಿ ವ್ಯವಸ್ಥೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೂ ಕಾಲೇಜಿನಿಂದ ಮಾರ್ಗದರ್ಶನ ದೊರಕುತ್ತದೆ.

ಅಭಿವೃದ್ಧಿಯ ಗುರಿ :

ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳು ನಡೆದಿವೆ. ಅಧುನೀಕತೆಯ ಬದಲಾವಣೆಯೊಂದಿಗೆ ಹೆಜ್ಜೆ ಹಾಕುತ್ತಿರುವ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯವನ್ನು ಇನ್ನಷ್ಟು ಉನ್ನತೀಕರಿಸಲು ಹೆಚ್ಚಿನ ಗಣಕಯಂತ್ರಗಳ ಬೇಡಿಕೆ ಇದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಲಿಕೆಗೆ ಅನುಕೂಲತೆ ಕಲ್ಪಿಸಲು ಇಂಗ್ಲಿಷ್ ಭಾಷಾ ಬೋಧಕರ ಅವಶ್ಯಕತೆ ಇದೆ. ವಿಶಾಲವಾದ ಮೈದಾನವಿರುವ ಕಾರಣದಿಂದ 400 ಮೀಟರ್ ಟ್ರ್ಯಾಕ್ ವ್ಯವಸ್ಥೆ ಹಾಗೂ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯ ಅಗತ್ಯ ಇದೆ.

ಕಾಲೇಜಿನ ಸುತ್ತ ಆವರಣ ಗೋಡೆಯ ನಿರ್ಮಾಣವಾಗಬೇಕಾಗಿದೆ. ಭಾಷಾ ಅಧ್ಯಯಕ್ಕೆ ಪೂರಕವಾಗಿ ಪ್ರತ್ಯೇಕವಾದ ಗ್ರಂಥಾಲಯ ಬೇಕು ಎನ್ನುವ ಬೇಡಿಕೆ ಇದೆ. ಕಾಲೇಜಿನ ಆವರಣದ ಒಳಗೆ ಕ್ಯಾಂಟೀನ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಕಾಲೇಜು ಆರಂಭವಾಗಿ ಕೆಲವೇ ವರ್ಷದಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಸಾಧನೆಯನ್ನು ಸಾಧಿಸಿದೆ. ಸರ್ಕಾರದ ಜೊತೆಗೆ ಸ್ಥಳೀಯರಾದ ಉದ್ಯಮಿ ಕಾಳಾವರ ವರದರಾಜ ಎಂ.ಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ. ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ದೂರದೃಷ್ಟಿ ಹಾಗೂ ಹಾಲಿ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರ ಮುತುವರ್ಜಿ ಕಾಲೇಜನ್ನು ಉನ್ನತೀಕರಿಸುವಲ್ಲಿ ಸಹಕಾರಿಯಾಗಿದೆ
ರಾಜೇಂದ್ರ ಎಸ್‌.ನಾಯಕ್ ಪ್ರಾಂಶುಪಾಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT