ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಾಡಿಯವರ ಜವಾಬ್ದಾರಿಯನ್ನು ಶಾಸಕ ಕೊಡ್ಗಿ ನಿರ್ವಹಿಸುತ್ತಾರೆ: ಅಪ್ಪಣ್ಣ ಹೆಗ್ಡೆ

Published 1 ಜುಲೈ 2023, 12:35 IST
Last Updated 1 ಜುಲೈ 2023, 12:35 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಳಿಕ ಶಾಸಕರಾಗಿರುವ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಿತಭಾಷಿಯಾಗಿ, ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ. ತಮ್ಮ ಶಾಸಕತ್ವದ ಜವಾಬ್ದಾರಿಯನ್ನು ಹಾಲಾಡಿಯವರಂತೆ ಮುನ್ನಡೆಸಿಕೊಂಡು ಹೋಗುತ್ತಾರೆ ಎನ್ನುವ ಭರವಸೆ ಇದೆ’ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಶುಕ್ರವಾರ ಶಾಸಕರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರದ ಅವಧಿಯಲ್ಲಿ ತಾರತಮ್ಯ ಮಾಡದೆ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯತತ್ಪರರಾಗಬೇಕು. ಕೊಡ್ಗಿ ಅವರು ಕ್ಷೇತ್ರದ ಪ್ರತಿ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಾರೆ ಎನ್ನುವ ನಂಬಿಕೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾಗಬೇಕು’ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕುಂದಾಪುರ ಹೃದಯ ಭಾಗ ಶಾಸ್ತ್ರೀ ವೃತ್ತದಲ್ಲಿ ಶಾಸಕರ ಕಚೇರಿ ಆರಂಭವಾಗಿರುವುದರಿಂದ ಜನರು ಇಲ್ಲಿಗೆ ಬಂದು ಅಹವಾಲು ನೀಡಲು ಸುಲಭವಾಗುತ್ತದೆ. ಶಾಸಕರ ಕಚೇರಿಯ ಮೂಲಕ ಜನರ ಕಡತಗಳನ್ನು ಕ್ಷಿಪ್ರವಾಗಿ ಸಂಬಂಧಿಸಿದ ಇಲಾಖೆ ಹಾಗೂ ವ್ಯಕ್ತಿಗಳಿಗೆ ವಿಲೇವಾರಿ ಮಾಡುವುದರಿಂದ ಸರ್ಕಾರಿ ಕೆಲಸಗಳು ಶೀಘ್ರವಾಗಿ ನಡೆಯಬೇಕು. ಶಾಸಕರ ಕಚೇರಿ ಅಭಿವೃದ್ಧಿ ಕೇಂದ್ರವಾಗಿ ಸಾಮಾನ್ಯ ಜನರ ಕಾರ್ಯಾಲಯವಾಗಲಿ’ ಎಂದು ಹಾರೈಸಿದರು.

ಶಾಸಕ ಎ. ಕಿರಣ್‌ಕುಮಾರ ಕೊಡ್ಗಿ ಮಾತನಾಡಿ, ‘ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಸಮಸ್ಯೆ ಹೊತ್ತುಕೊಂಡು ಬರುವ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಬರುವವರಿಗೆ ಅವರ ಕೆಲಸ - ಕಾರ್ಯಗಳು ಶೀಘ್ರವಾಗಿ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಶನಿವಾರ ಇಲ್ಲಿನ ಕಚೇರಿಯಲ್ಲಿ ನಾನು ಸಾರ್ವಜನಿಕರಿಗೆ ಲಭ್ಯವಿರುತ್ತೇನೆ. ಉಳಿದ ದಿನಗಳಲ್ಲಿ ಇಬ್ಬರು ಆಪ್ತ ಸಹಾಯಕರು ಕಚೇರಿಯಲ್ಲಿದ್ದು ಜನರಿಗೆ ಸ್ಪಂದನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ,  ದಕ್ಷಿಣ ಕನ್ನಡ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ, ಪ್ರಮುಖರಾದ ಸಬ್ಲಾಡಿ ಜಯರಾಮ್‌ ಶೆಟ್ಟಿ, ಸಂಪತ್‌ಕುಮಾರ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ, ಬಾರ್ಕೂರು ಶಾಂತಾರಾಮ್ ಶೆಟ್ಟಿ, ಕಾಡೂರು ಸುರೇಶ್ ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ಅಲ್ತಾರು ಗೌತಮ್‌ ಹೆಗ್ಡೆ, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ರೂಪಾ ಪೈ, ವಿಜಯ್‌ ಎಸ್‌ ಪೂಜಾರಿ, ದಿನಕರ ಶೆಣೈ ಇದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸ್ವಾಗತಿಸಿದರು. ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT