ಕುಂದಾಪುರ: ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದು ಸೇರಿದಂತೆ ವಿಶ್ವಕರ್ಮ ಸಮಯದಾಯದ ಅಭಿವೃದ್ಧಿಗಾಗಿ ಬೇಡಿಕೆಗಳು ಬಂದಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಎ. ಕಿರಣ್ ಕುಮಾರ ಕೊಡ್ಗಿ ತಿಳಿಸಿದರು.
ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ವಯಸ್ಸಾದ ವಿಶ್ವಕರ್ಮರಿಗೆ ಪಿಂಚಣಿ ನೀಡಬೇಕು. ವಿಶ್ವಕರ್ಮ ನಿಗಮಕ್ಕೆ ₹3 ಕೋಟಿ ಅನುದಾನ ನೀಡಬೇಕು. ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮ ಜನರಿದ್ದು, ಪಂಚ ಕುಲ ಕಸುಬುಗಳಿಗೆ ವಿಶ್ವಕರ್ಮ ವಿವಿ ಸ್ಥಾಪನೆಯಾಗಬೇಕು. 15 ಕರಕುಶಲ ತರಬೇತಿಗೆ ಪಿ.ಎಂ ವಿಶ್ವಕರ್ಮ ಯೋಜನೆ ಎಂದು ಹೆಸರಿಡುವ ಮೂಲಕ 15 ವಿಶ್ವಕರ್ಮರಿಗೆ ಗೌರವ ಸಲ್ಲಿಸಲಾಗಿದ್ದು, ಯೋಜನೆಯನ್ನು ಎಲ್ಲರೂ ಉಪಯೋಗಪಡಿಸಿಕೊಳ್ಳಬೇಕು ಎಂದರು.
ಸೇವಾ ಸಂಘದ ಮಾಜಿ ಅಧ್ಯಕ್ಷ ಕೋಣಿ ನಾರಾಯಣ ಆಚಾರ್ ಮಾತನಾಡಿ, ವಿಶ್ವಕರ್ಮರಿಗೆ ತರಬೇತಿ, ಪ್ರಮಾಣಪತ್ರದ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲದೆ ಇರುವುದರಿಂದ, ತಮಿಳುನಾಡನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ ಎಂದರು.
ತಹಶೀಲ್ದಾರ್ ಎಚ್.ಎಸ್. ಶೋಭಾಲಕ್ಷ್ಮಿ ಮಾತನಾಡಿ, ಪ್ರಕೃತಿಯ ಸೃಷ್ಟಿಯಲ್ಲಿ ಪುರಾಣ ಕಾಲದಿಂದಲೂ ವಿಶಿಷ್ಟ ತಾಂತ್ರಿಕತೆ ಮೂಲಕ ವಾಸ್ತುಶಿಲ್ಪ ನಿರ್ಮಿಸಿದ ವಿಶ್ವಕರ್ಮರು ಸರ್ವ ಕಾಲಕ್ಕೂ ಪೂಜನೀಯರು ಎಂದರು.
ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ತಾಲ್ಲೂಕು ಕಚೇರಿ ವ್ಯವಸ್ಥಾಪಕ ರಾಮಚಂದ್ರ ಮಯ್ಯ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರಮೇಶ್ ಕುಲಾಲ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಉಪಾಧ್ಯಕ್ಷ ಎಸ್. ರಮಾನಂದ ಆಚಾರ್ಯ, ಜತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ ಮೂಡುಗೋಪಾಡಿ, ಅಶೋಕ ಆಚಾರ್ಯ ಮಾರ್ಗೋಳಿ ಇದ್ದರು.
ಮಧುಕರ ಆಚಾರ್ ಅವರು ವಿಶ್ವಕರ್ಮ ಸಮಾಜದ ಪರವಾಗಿ ತಾಲ್ಲೂಕು ಕಚೇರಿಗೆ ವಿವಿಧ ಜಯಂತಿ ಆಚರಿಸಲು ಅನುವಾಗುವಂತೆ ಮರದ ಮಂಟಪ ಕೊಡುಗೆ ನೀಡಿದರು. ಉಪ ತಹಶೀಲ್ದಾರ್ ವಿನಯ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.