ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಗುಡಿಯಲ್ಲಿ ಅಕ್ಕರೆಯ ಮಿಲನ

ಬೋರ್ಡ್ ಹೈಸ್ಕೂಲ್‌ನ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ
Last Updated 12 ಜೂನ್ 2022, 4:48 IST
ಅಕ್ಷರ ಗಾತ್ರ

ಕುಂದಾಪುರ: ‘ಪೋಸ್ಟ್‌ ಮಾಸ್ಟರ್ ಆಗಿದ್ದ ದಿ.ಕೆ.ಆರ್. ಕೋತ್ವಾಲ್ ರಚಿಸಿದ್ದ ‘ಮುದದಿ ಮೆರೆಯಲಿ ನಮ್ಮ ಹಿರಿಯ ವಿದ್ಯಾಶಾಲೆ...’ ಶಾಲಾ ಗೀತೆಯ ಸಾಲುಗಳನ್ನು ಕೇಳುವಾಗ ಕುಂದಾಪುರದ ಬೋರ್ಡ್ ಹೈಸ್ಕೂಲ್ ಇತಿಹಾಸ ಕಣ್ಮುಂದೆ ಹಾದು ಹೋಗುತ್ತದೆ.

ಸುಮಾರು 130 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು, ತಾಲ್ಲೂಕಿನ ಜನತೆ ಬಾಯಿಯಲ್ಲಿ ಇಂದಿಗೂ ಬೋರ್ಡ್ ಹೈಸ್ಕೂಲ್ ಆಗಿಯೇ ಉಳಿದುಕೊಂಡಿದೆ. ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಆಡಳಿತದಲ್ಲಿ ಪ್ರಾರಂಭವಾಗಿದ್ದ ಈ ಶಾಲೆಯು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಭವಿಷ್ಯವನ್ನು ರೂಪಿಸಿದೆ. ಕನ್ನಡ ಸಾರಸ್ವತ ಲೋಕದ ಅನೇಕ ಪ್ರತಿಭೆಗಳಿಗೆ ಈ ಶಾಲೆಯ ಅಂಗಳವೇ ಸಾಹಿತ್ಯ ಕೃಷಿಗೆ ಆಡಂಬೊಲವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತ ಈ ಶಾಲೆಯ ವಿದ್ಯಾರ್ಥಿಯಾಗಿದ್ದರೆ, ನವ್ಯ ಸಾಹಿತ್ಯ ಲೋಕದ ಮೊಗೇರಿ ಗೋಪಾಲಕೃಷ್ಣ ಅಡಿಗ ಹಾಗೂ ಕವಿ ನಂದಳಿಕೆಯ ಮುದ್ದಣ್ಣ ಅವರ ಶಿಕ್ಷಣ ಕಾಯಕಕ್ಕೆ ಈ ಶಾಲೆಯೇ ವೇದಿಕೆಯಾಗಿತ್ತು.

ಸಾಹಿತಿ ವೈದೇಹಿ, ಎಂಜಿನಿಯರ್ ಸುಬ್ಬಣ್ಣ ಶೆಟ್ಟಿ, ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ.ಕೊಡ್ಗಿ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸೇರಿದಂತೆ ದೇಶದ ಸಾಹಿತ್ಯ, ಕೃಷಿ, ರಾಜಕೀಯ, ಧಾರ್ಮಿಕ, ಶಿಕ್ಷಣ, ಕ್ರೀಡೆ, ಬ್ಯಾಂಕಿಂಗ್, ವೈದ್ಯಕೀಯ, ಕಲೆ, ಪತ್ರಿಕೋದ್ಯಮ, ಪರಿಸರ, ಸಿನಿಮಾ, ಸಾಮಾಜಿಕ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳ ದೊಡ್ಡಪಟ್ಟಿಯೇ ಇದೆ.

ಶತಮಾನೋತ್ತರ ಬೆಳ್ಳಿ ಹಬ್ಬದ ಭವನ: 125 ವರ್ಷಗಳ ತುಂಬಿದ ನೆನಪಿನಲ್ಲಿ ಶಾಲೆಯಲ್ಲಿ ಒಂದಷ್ಟು ಅಭಿವೃದ್ಧಿ ಕಾಮಗಾರಿಗಳು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಆಸಕ್ತಿಯಿಂದ ನಡೆದಿವೆ. ಬಯಲು ರಂಗ ಮಂಟಪ, ಕೊಠಡಿಗಳನ್ನು ನಿರ್ಮಿಸಲಾಗಿದೆ.

ಹಳೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅಂದಾಜು ₹ 25 ಲಕ್ಷ ಮೊತ್ತದಲ್ಲಿ ಶತಮಾನೋತ್ತರ ಬೆಳ್ಳಿ ಹಬ್ಬದ ಭವನ ನಿರ್ಮಾಣ, ಅದರಲ್ಲಿ ಡಾ.ಕೋಟ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಹಾಗೂ ಕವಿ ಮುದ್ದಣ್ಣರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಜೂನ್‌ 12ರಂದು ಬೆಳಿಗ್ಗೆ 10 ಗಂಟೆಗೆ ಕರ್ಣಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ ಎಂ.ಎಸ್. ಪುತ್ಥಳಿ ಅನಾವರಣ ಮಾಡುವರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೊಲಮನ್ ಟಿ. ಸೋನ್ಸ್ ಅಧ್ಯಕ್ಷತೆ ವಹಿಸುವರು. ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಎ.ಜಿ.ಕೊಡ್ಗಿ, ಪ್ರಶಸ್ತಿ ಪುರಸ್ಕೃತ ಎಂಜಿನಿಯರ್ ಪ್ರೊ.ಎಂ.ಎಸ್. ಶೆಟ್ಟಿ ಕೋಟೇಶ್ವರ ಭಾಗವಹಿಸುವರು.

ಸಾಹಿತಿ ವೈದೇಹಿ, ಅಂಕಣಕಾರ ಕೋ.ಶಿವಾನಂದ ಕಾರಂತ, ದಾನಿ ಕಟೀಲು ಹೇಮಂತ ಪೈ, ಉದ್ಯಮಿ ದಿನೇಶ ಬೆಂಗಳೂರು ಶುಭಾಶಂಸನೆ ಮಾಡುವರು. ನಿರ್ಮಾಣಕ್ಕೆ ನೆರವಾದವರಿಗೆ ಸನ್ಮಾನ ಮತ್ತು ಗೌರವಾರ್ಪಣೆ ನಡೆಯಲಿದೆ. ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT