ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ಹೆಚ್ಚಾಗಲಿ

ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಎಚ್‌.ಪ್ರಸನ್ನ ಸೂಚನೆ
Last Updated 28 ಜೂನ್ 2022, 13:50 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹ ಹೆಚ್ಚಿದ್ದರೂ ಸಾಲ ವಿತರಣೆ ಪ್ರಮಾಣ ಕಡಿಮೆ ಇದೆ. ಸಾಲದ ಅಗತ್ಯ ಇರುವ ಅರ್ಹರಿಗೆ ಬ್ಯಾಂಕ್‌ಗಳು ಸತಾಯಿಸದೆ ಸಾಲ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಪ್ರಸನ್ನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಠೇವಣಿ ಪ್ರಮಾಣ ಹೆಚ್ಚಾಗಿದ್ದರೂ ಸಾಲ ನೀಡುವ ಪ್ರಮಾಣ ಕಡಿಮೆ ಇರುವುದು ಬ್ಯಾಂಕ್‌ಗಳ ಹಿತದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆಯಲ್ಲ.

ಸಾಲ ಮತ್ತು ಠೇವಣಿ ಅನುಪಾತದಲ್ಲಿ ದೊಡ್ಡ ಅಂತರವಿದ್ದು, ಸಾಲ ನೀಡುವ ಪ್ರಮಾಣ ಹೆಚ್ಚಿಸಬೇಕು. ಸರ್ಕಾರಿ ಯೋಜನೆಯ ಫಲಾನುಭವಿಗಳ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸದೆ ಸಾಲ ಮಂಜೂರು ಮಾಡಬೇಕು. ಅರ್ಜಿಗಳಲ್ಲಿ ದೋಷಗಳಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ, ಸಾಲ ಮಂಜೂರು ಮಾಡುವ ಮೂಲಕ ಯೋಜನೆಗಳ ಆರ್ಥಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಬ್ಯಾಂಕ್‌ಗಳು ಆರ್ಥಿಕ ನೆರವು ಒದಗಿಸಬೇಕು ಎಂದು ನಿರ್ದೇಶನ ನೀಡಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬ್ಯಾಂಕ್ ಖಾತೆಗಳನ್ನು ಉದ್ಯಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ಜಿಲ್ಲೆಯಲ್ಲಿ 16,000ಕ್ಕೂ ಹೆಚ್ಚು ಕೈಗಾರಿಕೆಗಳಿದ್ದು ಪೋರ್ಟಲ್‌ನಲ್ಲಿ ನೋಂದಾಯಿತ ಕೈಗಾರಿಕೆಗಳಿಗೆ ಸಾಲ ನೀಡುವಾಗ ಉದ್ಯಮ್ ನೊಂದಣಿ ಆಧಾರದ ಮೇಲೆ ಟ್ರೇಡ್ ಲೈಸೆನ್ಸ್ ಅನುಮತಿ ಪತ್ರ ಇಲ್ಲದೆ ಸ್ಥಳೀಯ ಪ್ರಾಧಿಕಾರದಿಂದ ಎನ್‌ಒಸಿ ಪಡೆದು ಸಾಲ ವಿತರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಈಚೆಗೆ ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೊಬೈಲ್‌ ಡಿಪಿ ಬಳಸಿಕೊಂಡು ₹ 10,000 ಮೌಲ್ಯದ ಅಮೆಜಾನ್ ಗಿಫ್ಟ್ ವೋಚರ್ ನೀಡುವಂತೆ ಸಂದೇಶಗಳು ಬಂದಿವೆ. ಅಧಿಕಾರಿಗಳು ಆನ್‌ಲೈನ್ ವಂಚನೆ ಬಗ್ಗೆ ಎಚ್ಚೆತ್ತುಕೊಂಡಿದ್ದರಿಂದ ಹಣ ಕಳೆದುಕೊಂಡಿಲ್ಲ. ಆನ್‌ಲೈನ್ ವಂಚನೆ ಪ್ರಕರಣಗಳ ಕುರಿತು ಗ್ರಾಹಕರಿಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಪಿಎಂ ಸ್ವನಿಧಿ ಯೋಜನೆಯ ಅರ್ಜಿಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಿ, ಸ್ವ-ಸಹಾಯ ಗುಂಪುಗಳು ಬ್ಯಾಂಕ್ ಖಾತೆ ತೆರೆಯಲು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯ ಬೆಳೆ ವಿಮೆ ಅರ್ಜಿಗಳನ್ನು ನೋಂದಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಬ್ಯಾಂಕ್‌ಗಳನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಆರ್‌ಬಿಐ ಅಧಿಕಾರಿ ಹಾಗೂ ಜಿಲ್ಲಾ ಲೀಡ್ ನೋಡೆಲ್ ಅಧಿಕಾರಿ ತನು ನಂಜಪ್ಪ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ವಾಸಪ್ಪ ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT