ಮಂಗಳವಾರ, ಮೇ 24, 2022
28 °C
ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲು ಸೂಚನೆ

ಶೇ 100 ಕೋವಿಡ್‌ ಲಸಿಕೆ ಗುರಿ ಸಾಧಿಸಿ: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಎರಡನೇ ಡೋಸ್ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇರುವವರನ್ನು ಗುರುತಿಸಿ ಆದ್ಯತೆ ಮೇಲೆ ಲಸಿಕೆ ಹಾಕಬೇಕು. ಜಿಲ್ಲೆ ಶೇ 100 ಲಸಿಕೆ ಗುರಿ ಸಾಧಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಉಡುಪಿಯ ಬೋರ್ಡ್‌ ಹೈಸ್ಕೂಲ್‌, ಹನುಮಂತ ನಗರ ಸರ್ಕಾರಿ ಶಾಲೆ, ಹಾಜಿ ಅಬ್ದುಲ್ಲ ಲಸಿಕಾ ಕೇಂದ್ರ, ರಾಜ್ಯ ಮಹಿಳಾ ನಿಲಯ, ಸಖಿ ಒನ್ ಸೆಂಟರ್, ಅಂಗನವಾಡಿ ಕೇಂದ್ರಗಳಿಗೆ ಭೇಟಿನೀಡಿ ಕೋವಿಡ್‌ ಮಾರ್ಗಸೂಚಿಗಳ ಪಾಲನೆಯ ಬಗ್ಗೆ ಪರಿಶೀಲಿಸಿ ಮಾತನಾಡಿದರು.

ಆರಂಭದಲ್ಲಿ ಉಡುಪಿಯ ಹಾಜಿ ಅಬ್ದುಲ್ಲ ಲಸಿಕಾ ಕೇಂದ್ರಕ್ಕೆ ಭೇಟಿನೀಡಿದ ಲೋಕಾಯುಕ್ತರು ಅಲ್ಲಿನ ವೈದ್ಯರಿಂದ ಲಸಿಕೆಯ ವಿವರಗಳನ್ನು ಪಡೆದುಕೊಂಡರು. ಬಳಿಕ ಮಾತನಾಡಿ, ಎರಡನೇ ಡೋಸ್‌ ಲಸಿಕೆ ಪಡೆಯದವರಿಗೆ ಕರೆಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಬೇಕು.  ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡರೆ ಕೋವಿಡ್ ಮರಣ ಪ್ರಮಾಣ ತಗ್ಗಿಸಬಹುದು ಎಂದು ಸಲಹೆ ನೀಡಿದರು.

ಲಸಿಕೆ ಪಡೆಯಲು ಬಂದಿದ್ದವರನ್ನು ಮಾತನಾಡಿಸಿ, ‘ನೆರೆ ಹೊರೆಯವರು, ಪರಿಚಯದವರು, ಸಂಬಂಧಿಗಳು ಹಾಗೂ ಸ್ನೇಹಿತರಿಗೆ ಕೋವಿಡ್ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ನಗರದ ಬೋರ್ಡ್‌ ಹೈಸ್ಕೂಲ್‌ಗೆ ಭೇಟಿನೀಡಿದ ಲೋಕಾಯುಕ್ತರು ತರಗತಿಗಳಿಗೆ ತೆರಳಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯ ಬಗ್ಗೆ ಪರಿಶೀಲಿಸಿ, ಶಾಲೆಗೆ ಬರಲಾದವರಿಗೆ ಆನ್‌ಲೈನ್‌ನಲ್ಲಿ ತರಗತಿಗಳು ನಡೆಯಬೇಕು. ಮಕ್ಕಳ ಸುರಕ್ಷತೆಗೆ ಗರಿಷ್ಠ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭ ಶಾಲಾ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ಗ್ರಂಥಾಲಯ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಪ್ರಾಂಶುಪಾಲರಾದ ಲೀಲಾಬಾಯಿ ಹಾಗೂ ಮುಖ್ಯೋಪಾಧ್ಯಾಯ ಸುರೇಶ್‌ ಭಟ್ ಮನವಿ ನೀಡಿದರು. ಸ್ಥಳ ಪರಿಶೀಲಿಸಿದ ಲೋಕಾಯುಕ್ತರು ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಇದೇವೇಳೆ ಬ್ಯಾಟರಿ ಚಾಲಿತ ಗೂಡು ದೀಪ ನಿರ್ಮಿಸಿದ ಶಾಲೆಯ ಆಶ್ಲೇಷ್‌, ಭೀಮನಗೌಡ, ಪ್ರದೀಪ್‌ಗೆ ಶಹಬ್ಬಾಸ್ ನೀಡಿದರು.

ನೆನಪಿನ ಬುತ್ತಿ ಬಿಚ್ಚಿಟ್ಟ ಲೋಕಾಯುಕ್ತರು: ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ ಓದಿದ ನೆನಪುಗಳನ್ನು ಬಿಚ್ಚಿಟ್ಟ ಲೋಕಾಯುಕ್ತರು ಪಾಠ ಹೇಳಿಕೊಟ್ಟ ಗುರುಗಳನ್ನು ಸ್ಮರಿಸಿದರು. ಹಳೆಯ ಶಾಲೆಯಿದ್ದ ಜಾಗದಲ್ಲಿ ಹೊಸ ಕಟ್ಟಡಗಳು ಎದ್ದು ನಿಂತಿವೆ. 1959ರಲ್ಲಿ ಇದೇ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದಾಗಿ ನೆನಪು ಮಾಡಿಕೊಂಡರು.

ಬಳಿಕ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿ ನಿರ್ಗತಿಕ ಮಹಿಳೆಯರ ಯೋಗ ಕ್ಷೇಮ ವಿಚಾರಿಸಿ ಅಹವಾಲು ಆಲಿಸಿದರು. ಅಗರಬತ್ತಿ ತಯಾರಿಕೆ ಕೇಂದ್ರಕ್ಕೆ ಭೇಟಿನೀಡಿ ನಿರ್ಗತಿಕರ ಸ್ಥಿತಿ ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಲೋಕಾಯುಕ್ತರು, ಮಹಿಳಾ ನಿಲಯದಲ್ಲಿ ಕೆಲವು ಸುಧಾರಣೆಗಳಾಗಬೇಕು, ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಹಾಗೂ ಜೈಲುಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸಂಬಳವನ್ನು ಮಹಿಳಾ ನಿಲಯದಲ್ಲಿರುವ ‌ನಿರ್ಗತಿಕರಿಗೆ ನೀಡಬೇಕು. ಪ್ರತಿಯೊಬ್ಬರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ಸಂಬಳ ಹಾಕಬೇಕು. ನಿರ್ಧಿಷ್ಟ ಕಾಲಾವಧಿಯಲ್ಲಿ ಕೆಲಸ ಆಗಬೇಕು ಎಂದು ತಿಳಿಸಿದ್ದೇನೆ ಎಂದರು.

ಇದೇ ವೇಳೆ ಬಾಗಲಕೋಟೆ ಹಾಗೂ ಉಡುಪಿಯ ಮಹಿಳೆಯರು ಮಹಿಳಾ ನಿಲಯದಿಂದ ಬಿಡುಗಡೆಮಾಡುವಂತೆ ಲೋಕಾಯುಕ್ತರನ್ನು ಅಂಗಲಾಚಿದರು. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿ ಸಖಿ ಒನ್ ಸೆಂಟರ್‌ಗೆ ಭೇಟಿನೀಡಿ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ನಂತರ, ಹನುಮಂತ ನಗರ ಶಾಲೆಗೆ ಭೇಟಿನೀಡಿ ಕೋವಿಡ್ ಮಾರ್ಗಸೂಚಿ ಪಾಲನೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್‌ ಪ್ರದೀಪ್ ಕುರ್ಡೆಕರ್, ಡಿಎಚ್‌ಒ ಡಾ.ನಾಗಭೂಷಣ ಉಡುಪ, ಡಿಡಿಪಿಐ ಎನ್‌.ಎಚ್‌.ನಾಗೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.