ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬಂದರಿನಲ್ಲಿ ಭರ್ಜರಿ ಬೊಂಡಾಸ್‌ ಮೀನು

ಯಥೇಚ್ಚ ಮೀನು ಸಿಕ್ಕರೂ ದರ ಕುಸಿತದಿಂದ ಮೀನುಗಾರರಿಗೆ ಸಿಗದ ಲಾಭ
Published 18 ಆಗಸ್ಟ್ 2023, 4:15 IST
Last Updated 18 ಆಗಸ್ಟ್ 2023, 4:15 IST
ಅಕ್ಷರ ಗಾತ್ರ

ಉಡುಪಿ: ಮೀನುಗಾರಿಕಾ ಋತುವಿನ ಆರಂಭದಲ್ಲೇ ಮೀನುಗಾರರ ಬಲೆಗೆ ಭರ್ಜರಿಯಾಗಿ ಬೊಂಡಾಸ್‌ (ಸ್ಕ್ವಿಡ್‌) ಮೀನುಗಳು ಬಿದ್ದಿವೆ. ಗುರುವಾರ ಮಲ್ಪೆಯ ಬಂದರಿನ ತುಂಬೆಲ್ಲ ಬೊಂಡಾಸ್‌ ಮೀನು ರಾಶಿ ಹಾಕಲಾಗಿತ್ತು.

ಕೆಲ ದಿನಗಳ ಹಿಂದಷ್ಟೆ ಆಳಸಮುದ್ರ ಮೀನುಗಾರಿಕೆಗೆ ಇಳಿದಿದ್ದ ಮೀನುಗಾರರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಅದರಂತೆ ಮೀನುಗಾರರಿಗೆ ಬಂಪರ್‌ ಇಳುವರಿ ಸಿಕ್ಕಿದೆ. ಪ್ರತಿ ಬೋಟ್‌ಗೂ ತಲಾ 5 ರಿಂದ 6 ಟನ್‌ನಷ್ಟು ಬೊಂಡಾಸ್‌ ಲಭ್ಯವಾಗಿದೆ.

ಬೆಲೆ ಕುಸಿತ: ಯಥೇಚ್ಛವಾಗಿ ಬೊಂಡಾಸ್‌ ಸಿಕ್ಕರೂ ಲಾಭ ಮಾತ್ರ ಮೀನುಗಾರರಿಗೆ ದಕ್ಕಲಿಲ್ಲ. ಮಾರುಕಟ್ಟೆಗೆ ಬೇಡಿಕೆಗಿಂತ ಹಲವು ಪಟ್ಟು ಹೆಚ್ಚು ಬೊಂಡಾಸ್‌ ಪೂರೈಕೆಯಾಗಿದ್ದರಿಂದ ಬೆಲೆ ದಿಢೀರ್ ಕುಸಿತವಾಯಿತು.

ಸಾಮಾನ್ಯವಾಗಿ ದೊಡ್ಡಗಾತ್ರದ (ಎ ಗ್ರೇಡ್‌) ಬೊಂಡಾಸ್‌ ಕೆ.ಜಿಗೆ ₹ 400 ರಿಂದ ₹ 500ಕ್ಕೆ ಮಾರಾಟವಾಗುತ್ತಿತ್ತು. ಗುರುವಾರ ಕೆ.ಜಿಗೆ ₹ 80 ರಿಂದ ₹ 100ಕ್ಕೆ ಇಳಿಕೆಯಾಗಿತ್ತು. ಖರೀದಿದಾರರು ಇಲ್ಲದೆ ಮೀನುಗಾರರು ಆತಂಕದಲ್ಲಿದ್ದ ದೃಶ್ಯಗಳು ಬಂದರಿನಲ್ಲಿ ಕಾಣುತ್ತಿತ್ತು.

‘ಹೆಚ್ಚಿನ ಪ್ರಮಾಣದಲ್ಲಿ ಬೊಂಡಾಸ್ ಸಿಕ್ಕರೂ ಲಾಭ ಸಿಗದಂತಾಗಿದೆ. ಇದನ್ನು ಖರೀದಿಸಲು ಖರೀದಿದಾರರು ಆಸಕ್ತಿ ತೋರುತ್ತಿಲ್ಲ. ಈ ಮೀನಿಗೆ ಗಾಳಿ ತಾಗಿದರೆ ಬೇಗ ಕೊಳೆತುಹೋಗುತ್ತದೆ. ಒಂದೆರಡು ದಿನದಲ್ಲಿ ಮಾರಾಟವಾಗದಿದ್ದರೆ ಫಿಶ್‌ಮಿಲ್‌ಗಳಿಗೆ ಕೆ.ಜಿಗೆ ಐದಾರು ರೂಪಾಯಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ’ ಎಂದು ಬೋಟ್ ಮಾಲೀಕ ಲೋಕನಾಥ್ ಕುಂದರ್ ಆತಂಕ ವ್ಯಕ್ತಪಡಿಸಿದರು.

ಕಳೆದ ವರ್ಷ ಕೆ.ಜಿ ಬೊಂಡಾಸ್‌ಗೆ ಗರಿಷ್ಠ 400 ದರ ಸಿಕ್ಕಿತ್ತು. ಈ ಬಾರಿ 90ಕ್ಕೆ ಕುಸಿದಿದೆ. ಸಿ ಗ್ರೇಡ್‌ ಕೆ.ಜಿಗೆ ₹ 15, ಬಿ ಗ್ರೇಡ್‌ 50 ಹಾಗೂ ಎ ಗ್ರೇಡ್‌ ಬೊಂಡಾಸ್‌ಗೆ 90ದರ ನಿಗದಿಪಡಿಸಲಾಗಿದೆ. ಒಮ್ಮೆ ಆಳಸಮುದ್ರ ಮೀನುಗಾರಿಕೆಗೆ ಇಳಿದರೆ ಒಂದು ಬೋಟ್‌ಗೆ ₹ 4 ಲಕ್ಷ ಮೌಲ್ಯದ ಡೀಸೆಲ್‌ ಖರ್ಚಾಗುತ್ತದೆ. ಈಗಿರುವ ದರದಲ್ಲಿ ಹಾಕಿದ ಬಂಡವಾಳವೂ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೊಂಡಾಸ್‌ಗೆ ಸ್ಥಳೀಯವಾಗಿ ಬೇಡಿಕೆ ಇಲ್ಲ. ಗೋವಾ, ಗುಜರಾತ್ ಸೇರಿದಂತೆ ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಇತರ ಜಾತಿಯ ಮೀನುಗಳಂತೆ ಬೊಂಡಾಸ್ ಅನ್ನು ಸ್ಥಳೀಯರು ಹೆಚ್ಚಾಗಿ ಖರೀದಿ ಮಾಡದ ಪರಿಣಾಮ ದರ ಭಾರಿ ಕುಸಿತವಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಅತಿ ಹೆಚ್ಚು ಬೇಡಿಕೆ ಇರುತ್ತಿದ್ದ ಬೊಂಡಾಸ್‌ ಮೀನನ್ನು ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ. ಹಾಕಿದ ಬಂಡವಾಳವೂ ಮರಳಿ ಬರುವ ವಿಶ್ವಾಸ ಇಲ್ಲ ಎಂದು ಮೀನುಗಾರರಾದ ಪ್ರಭಾಕರ್ ಕೋಟ್ಯಾನ್‌ ಬೇಸರ ವ್ಯಕ್ತಪಡಿಸಿದರು.

ಉಡುಪಿಯ ಮಲ್ಪೆ ಬಂದರಿನಲ್ಲಿ ಬೊಂಡಾಸ್‌ ಮೀನುಗಳನ್ನು ವಿಂಗಡಿಸುತ್ತಿರುವ ಮೀನುಗಾರ ಮಹಿಳೆಯರು
ಉಡುಪಿಯ ಮಲ್ಪೆ ಬಂದರಿನಲ್ಲಿ ಬೊಂಡಾಸ್‌ ಮೀನುಗಳನ್ನು ವಿಂಗಡಿಸುತ್ತಿರುವ ಮೀನುಗಾರ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT