ಗುರುವಾರ , ಜನವರಿ 21, 2021
30 °C
5 ವರ್ಷಗಳಲ್ಲಿ ₹ 3,986 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ: ಕಾನೂನು ಸಚಿವ ಮಾಧುಸ್ವಾಮಿ

ದ.ಕ, ಉ.ಕ, ಉಡುಪಿಯಲ್ಲಿ 1,348 ಕಿಂಡಿ ಅಣೆಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ 1,348 ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹ 3,986 ಕೋಟಿ ವೆಚ್ಚವಾಗಲಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. 5 ವರ್ಷಗಳಲ್ಲಿ ಹಂತ ಹಂತವಾಗಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಸಣ್ಣ ನೀರಾವರಿ, ಸಂಸದೀಯ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಕಾಪುವಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ವಾಹಿನಿಯಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರದಂತೆ ಹಿಡಿದಿಡಲು ಹಾಗೂ ಸಿಹಿನೀರಿನೊಂದಿಗೆ ಉಪ್ಪು ನೀರು ಬೆರೆಯುವುದನ್ನು ತಡೆಯಲು ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್‌ ಸಿದ್ಧಪಡಿಸಲಾಗಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 446, ಉಡುಪಿಯಲ್ಲಿ 424, ಉತ್ತರ ಕನ್ನಡದಲ್ಲಿ 466 ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲಾಗುವುದು ಎಂದರು.

ಕರಾವಳಿಯಲ್ಲಿ ಬೃಹತ್‌ ನೀರಾವರಿ ಯೋಜನೆಗಳ ಅನುಷ್ಠಾನಕ್ಕಿಂತ ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಬೇಕಾದ ಅಗತ್ಯವಿದೆ. ಹಾಗಾಗಿ, ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಕರಾವಳಿ ಭಾಗದ ಶಾಸಕರ ಬೇಡಿಕೆಯಂತೆ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದರು.

ನೇತ್ರಾವತಿ ನದಿಯಿಂದ ಹರಿದುಹೋಗುವ ಹೆಚ್ಚುವರಿ ನೀರನ್ನು ತಡೆದು ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ನೀಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಹರೆಕಡ ಸೇತುವೆ ಬಳಿ ₹ 175 ಕೋಟಿ ವೆಚ್ಚದಲ್ಲಿ ಬ್ರಿಜ್‌ ಕಂ ಬ್ಯಾರೆಜ್‌ ನಿರ್ಮಿಸಿ 0.60 ಟಿಎಂಸಿ ನೀರು ಸಂಗ್ರಹಿಸಿ 300 ಎಕೆರೆ ಕೃಷಿ ಭೂಮಿಗೆ ನೀರು ಒದಗಿಸಲಾಗುವುದು. ಕುಡಿಯುವ ಉದ್ದೇಶಕ್ಕೂ ನೀರು ಬಳಸಿಕೊಳ್ಳಲಾಗುವುದು ಎಂದರು.‌

ಕಾರವಾರ ಜಿಲ್ಲೆಯಲ್ಲಿ ಸಿಹಿನೀರು ಹಾಗೂ ಉಪ್ಪುನೀರು ನಡುವಿನ ಪ್ರದೇಶದಲ್ಲಿ ಕಾರ್ಲೆಂಡ್‌ ಅಣೆಕಟ್ಟು ನಿರ್ಮಿಸಿ ಪ್ರಾನ್ಸ್‌ (ಸೀಗಡಿ) ಕೃಷಿಗೆ ಒತ್ತು ನೀಡಲಾಗುವುದು. ಈ ಸಂಬಂಧ ಕೇಂದ್ರಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಯೋಜನೆ ಜಾರಿಗೆ ₹ 1,000 ಕೋಟಿಯ ಅಗತ್ಯವಿದ್ದು, ಸಮಗ್ರ ಯೋಜನೆ ರೂಪಿಸಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟಗಳಿಗೆ ಹಾಕಲಾಗಿರುವ ಹಲಗೆಯನ್ನು  ಬದಲಾಯಿಸಲು ಹಾಗೂ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆಯಲ್ಲಿ ₹ 4 ಕೋಟಿ ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅನುದಾನದ ಕೊರತೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದರು.

ಉಪ್ಪು ನೀರು ನುಗ್ಗಿ ಮಟ್ಟುಗುಳ್ಳ ಹಾಳಾಗುವುದನ್ನು ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಿಂಡಿ ಅಣೆಕಟ್ಟೆಗಳ ನಿರ್ಮಾಣದ ಪ್ರಮುಖ ಉದ್ದೇಶಗಳಲ್ಲಿ ಉಪ್ಪುನೀರು ತಡೆಯೂ ಒಂದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.