ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಾರುಗಿರಿ ಮಧ್ವರ ಪ್ರತಿಮೆಗೆ ಅಭಿಷೇಕ

ಕೃಷ್ಣಮಠದಲ್ಲಿ ಮಧ್ವನವಮಿ: ಆಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ವಿಶೇಷ ಪೂಜೆ
Last Updated 3 ಫೆಬ್ರುವರಿ 2020, 13:57 IST
ಅಕ್ಷರ ಗಾತ್ರ

ಉಡುಪಿ: ಕುಂಜಾರುಗಿರಿ ಬೆಟ್ಟದ ತಪ್ಪಲಿನಲ್ಲಿರುವ 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಮೂರ್ತಿಗೆ ಮಧ್ವನವಮಿಯ ಪ್ರಯುಕ್ತ ಸೋಮವಾರ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು, ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರತೀರ್ಥರು ಮಧ್ವಾಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪಂಚ ಕಲಶಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆ ನೆರವೇರಿತು. ಮಠದ ವಿದ್ವಾಂಸರಾದ ರಾಜಗೋಪಾಲಚಾರ್ಯರು ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥರು ಹಿಂದೆ, ಮಧ್ವಾಚಾರ್ಯರ ಏಕಶಿಲಾ ಪ್ರತಿಮೆಯನ್ನು ಕುಂಜಾರುಗಿರಿಯಲ್ಲಿ ಪ್ರತಿಷ್ಠಾಪಿಸಿದ್ದರು. ಈ ಪ್ರತಿಮೆ ನಿರ್ಮಾಣವಾದ ಬಳಿಕ ಕುಂಜಾರುಗಿರಿಗೆ ಭೇಟಿನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.

ಕೃಷ್ಣಮಠದಲ್ಲಿ ಪೂಜೆ

ಮಧ್ವನವಮಿಯ ಪ್ರಯುಕ್ತಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಆಚಾರ್ಯ ಮಧ್ವರು ಅದೃಶ್ಯರಾಗಿದ್ದಾರೆ ಎನ್ನಲಾದ ಸ್ಥಳದಲ್ಲಿ ಪರ್ಯಾಯ ಅದಮಾರು ಈಶಪ್ರಿಯ ತೀರ್ಥರು ಸೋಮವಾರ ವಿಶೇಷ ಪೂಜೆಯನ್ನು ನೆರವೇರಿಸಿದರು.

ಇದೇವೇಳೆಕೃಷ್ಣ ಮಠದ ರಥಬೀದಿಯಲ್ಲಿ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಪಲಿಮಾರು ಮಠದ ಹೃಷಿಕೇಶತೀರ್ಥರು ರಚಿಸಿದ ಸರ್ವಮೂಲ ಗ್ರಂಥದ ಮೂಲ ಹಸ್ತಪ್ರತಿಗಳನ್ನು ಸುವರ್ಣ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮಧ್ವ ನವಮಿಯ ವಿಶೇಷ

ಮಕರ ಮಾಸದ ಶುದ್ಧ ನವಮಿಯಂದು ಮಧ್ವಾಚಾರ್ಯರು ಉಡುಪಿಯ ಅನಂತೇಶ್ವರ ದೇವಾಲಯದ ಮುಂಭಾಗ ಐತರೇಯೋಪನಿಷತ್ತಿನ ಪ್ರವಚನ ನಡೆಸುತ್ತ ಸಶರೀರವಾಗಿ ಅದೃಶ್ಯರಾದರು ಎನ್ನಲಾಗುತ್ತದೆ. ಈ ದಿನದಂದು ಅಷ್ಟಮಠಗಳ ಯತಿಗಳು ವಾದ್ಯಘೋಷ, ಮಂತ್ರಘೋಷಗಳೊಂದಿಗೆ ಅನಂತೇಶ್ವರನ ದೇಗುಲಕ್ಕೆ ಬಂದುಅಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯ.

ವಿಶೇಷ ಪೂಜೆ ಬಳಿಕ ರಥೋತ್ಸವ ನಡೆಯುತ್ತದೆ. ಜತೆಗೆ, ಮಧ್ವಾಚಾರ್ಯರ ಅವತಾರ ಸ್ಥಳವಾದ ಪಾಜಕದಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ. ದ್ವೈತ ಮತ ಸಂಸ್ಥಾಪಕರಾದ ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕಡೆಗೋಲು ಕೃಷ್ಣನ ವಿಗ್ರವನ್ನು ಪ್ರತಿಷ್ಠಾಪಿಸಿ, 8 ಬಾಲ ಯತಿಗಳನ್ನು ಸರತಿ ಸಾಲಿನಲ್ಲಿ ಕೃಷ್ಣನ ಪೂಜಾ ಕೈಂಕರ್ಯಕ್ಕೆ ನೇಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT