ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

ಮಹಾಶಿವರಾತ್ರಿ ಸಂಭ್ರಮ: ಮಂಜುನಾಥನ ದೇಗುಲಗಳಲ್ಲಿ ವಿಶೇಷ ಪೂಜೆ, ರಥೋತ್ಸವ
Last Updated 11 ಮಾರ್ಚ್ 2021, 14:40 IST
ಅಕ್ಷರ ಗಾತ್ರ

ಉಡುಪಿ: ಎಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಶಿವನ ದೇವಸ್ಥಾನಗಳಲ್ಲಿ ನಿರಂತರವಾಗಿ ಶಿವನಾಮ ಸ್ಮರಣೆ ನಡೆಯುತ್ತಿದೆ. ಬೆಳಿಗ್ಗಿನಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗುತ್ತಿವೆ. ಭಕ್ತರು ಮಂಜುನಾಥನ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಿದ್ದಾರೆ.

ಬನ್ನಂಜೆಯ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ರಥಬೀದಿಯಲ್ಲಿರುವ ಅನಂತೇಶ್ವರ, ಚಂದ್ರಮೌಳೀಶ್ವರ, ಕೊಡವೂರು ಶಂಕರ ನಾರಾಯಣ ದೇವಸ್ಥಾನಗಳಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ದೇವಸ್ಥಾನಗಳನ್ನು ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿದೆ.

ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರು ದಿನ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗುರುವಾರ ಬೆಳಿಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ನಾಳಿಕೇರಾಭಿಷೇಕ, ಶರರುದ್ರ ಪಾರಾಯಣ, ನವಕ ಪ್ರದಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ನಡೆಯಿತು.

ಸಂಜೆ ಶಿವರಾತ್ರಿ ಅರ್ಘ್ಯಪ್ರಧಾನಾಧಿಗಳು ನಡೆದು, ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ವಾರ್ಷಿಕ ಪೂಜೆ ನೆರವೇರಿತು. ರಾತ್ರಿ ಉತ್ಸವ ಬಲಿಯೊಂದಿಗೆ ವೈಭವದ ರಥೋತ್ಸವ ನೆರವೇರಿತು. ಭಕ್ತರು ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಹಾ ರಂಗಪೂಜೆಗೆ ಚಾಲನೆ ದೊರೆಯಿತು. ಜಾಗರಣೆ ಅಂಗವಾಗಿ ದೇವಸ್ಥಾನದಲ್ಲಿ ಭೀಷ್ಮ ಪ್ರತಿಜ್ಞೆ ಯಕ್ಷಗಾನ ಬಯಲಾಟ ಪ್ರಸಂಗ ಆಯೋಜಿಸಲಾಗಿತ್ತು. ಫೆ.12ರಂದು ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

ರಥಬೀದಿಯಲ್ಲಿರುವ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇಗುಲಗಳಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದರು. ಮಾರ್ಚ್‌ 16ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಬಲಿ ನಡೆಯಲಿದ್ದು, 15ರಂದು ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗಲಿದೆ.

ಮಹಾತೋಬಾರ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಗುರುವಾರ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಶಿವ ನಮಸ್ಕಾರ ಮತ್ತು ಅಷ್ಟೋತ್ತರ ಶತನಾಮಾವಳಿ ಪಠಣ, ಬಿಲ್ವಪತ್ರೆ ಮತ್ತು ಪುಷ್ಪಾರ್ಚನೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಜಿ.ಕೊಡವೂರು ಕಾರ್ಯಕ್ರಮಕ್ಕೆ ಮೂಲಕ ಚಾಲನೆ ನೀಡಿದರು.

ವಿವಿಧ ಭಜನಾ ಮಂಡಳಿಗಳಿಂದ ಬೆಳಿಗ್ಗೆ 6.30ರಿಂದ ರಾತ್ರಿ 8.30ರವರೆಗೆ ಉದಯಾಸ್ತಮಾನ ಭಜನೆ ಜರುಗಿತು. ಕೊಡವೂರು ವಲಯ ಬ್ರಾಹ್ಮಣ ಸಮಿತಿ ಸದಸ್ಯರು ಶತರುದ್ರ ಪಾರಾಯಣ ನೆರವೇರಿಸಿದರು. ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಶತರುದ್ರಾಭಿಷೇಕ ಹಾಗೂ ಸಂಜೆ ರಂಗಪೂಜೆ ಸಂಪನ್ನಗೊಂಡಿತು.

ನಗರದ ಎಲ್ಲ ಈಶ್ವರನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಜಾಗರಣೆ ಅಂಗವಾಗಿ ಭಜನೆ, ಯಕ್ಷಗಾನ, ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT