ಉಡುಪಿ: ರಾಜ್ಯವನ್ನು ಆರೋಗ್ಯ ಸ್ನೇಹಿ ವೃತ್ತಿಪರರ ಕೇಂದ್ರವನ್ನಾಗಿ ಮಾಡಿದರೆ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಧಾರಿಸಲು ಸಾಧ್ಯ ಎಂದು ಮಣಿಪಾಲದ ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ ಅಭಿಪ್ರಾಯಪಟ್ಟರು.
ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಫಿಸಿಯೋಥೆರಪಿ ದಿನಾಚರಣೆ ಮತ್ತು ಡಾ.ಯು.ಟಿ. ಇಫ್ತಿಕರ್ ಫರೀದ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಇಫ್ತಿಕರ್ ಅವರು ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್‌ಕೇರ್ ಕ್ಷೇತ್ರದ ಉನ್ನತಿಗೆ ಕಾರಣರಾಗಿದ್ದಾರೆ. ಸರ್ಕಾರವು ಅವರನ್ನು ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸೂಕ್ತವಾಗಿದೆ. ಅವರು ರಾಜ್ಯದಾದ್ಯಂತ ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂಬ ಖಾತರಿ ಇದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಯು.ಟಿ. ಇಫ್ತಿಕಾರ್ ಫರೀದ್, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದೂ ಹೇಳಿದರು.
ವೃತ್ತಿಪರರ ಕೌಶಲವನ್ನು ಹೆಚ್ಚಿಸಲು, ಆಧುನಿಕ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸಲು ಚಿಂತನೆ ನಡೆಸಿರುವುದಾಗಿಯೂ ವಿವರಿಸಿದರು.
ಮಾಹೆಯ ಉಪಕುಲಪತಿ ಲೆ. ಜ. ಎಂ. ಡಿ. ವೆಂಕಟೇಶ್ ಮಾತನಾಡಿ, ಇಫ್ತಿಕಾರ್ ಫರೀದ್ ಅವರು ಸರ್ಕಾರದಿಂದ ನೇಮಕವಾಗಿರುವುದು ಸೂಕ್ತವಾಗಿದೆ ಎಂದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಇಫ್ತಿಕಾರ್ ಫರೀದ್ ಅವರು ಫಿಸಿಯೋಥೆರಪಿ ಕ್ಷೇತ್ರಕ್ಕೆ ಸಲ್ಲಿಸಿರುವ ಗಮನಾರ್ಹ ಕೊಡುಗೆಗಳಿಂದಾಗಿ ಸರ್ಕಾರ ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದೆ ಎಂದು ಹೇಳಿದರು.
ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಉಪಕುಲಪತಿ ಡಾ. ದಿಲೀಪ್ ನಾಯಕ್, ಮಾಹೆಯ ಬೋಧಕ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಎಂಸಿಎಚ್‌ಪಿಯ ಡೀನ್ ಡಾ. ಜಿ. ಅರುಣ್ ಮಯ್ಯ ಸ್ವಾಗತಿಸಿದರು. ಡಾ. ಜಾನ್ ಸೋಲೋಮನ್ ವಂದಿಸಿದರು. ಡಾ. ಅಬ್ರಹಾಂ ಸಾಮ್ಯುವೆಲ್ ಬಾಬು ಕಾರ್ಯಕ್ರಮ ನಿರ್ವಹಿಸಿದರು. ಅರುಂಧತಿ ಹೆಬ್ಬಾರ್ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.