ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗ್ರಾ. ಪಂ.ಗಳಲ್ಲಿ ಶಿಕ್ಷಣ ಕಾರ್ಯಪಡೆ ರಚಿಸಿ’

ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಸೂಚನೆ
Published : 19 ಸೆಪ್ಟೆಂಬರ್ 2024, 6:50 IST
Last Updated : 19 ಸೆಪ್ಟೆಂಬರ್ 2024, 6:50 IST
ಫಾಲೋ ಮಾಡಿ
Comments

ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶಿಕ್ಷಣ ಕಾರ್ಯಪಡೆಯನ್ನು ರಚಿಸಬೇಕು ಮತ್ತು ಶಾಲೆಗಳಲ್ಲಿ ತೆರೆದಮನೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ಫೋಕ್ಸೊಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳ ಜೀವನ ಮಟ್ಟವನ್ನು ಉತ್ತಮಗೊಳಿಸಲು ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯರಾಗಿರುತ್ತಿರುವ ಕುರಿತು ವರದಿಗಳು ಪ್ರಕಟವಾಗುತ್ತಿವೆ. ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಈ ಸಮಸ್ಯೆ ತೊಲಗಿಸಲು ಪ್ರಯತ್ನಿಸಬೇಕು. ಪ್ರಕರಣ ಗಮನಕ್ಕೆ ಬಂದ ತಕ್ಷಣ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿರುವ ವಾಹನ ಚಾಲಕರ ಕುರಿತ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.

5 ಕಿ.ಮೀ. ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಪ್ರತೀ ತಿಂಗಳು ₹600 ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆಯುವಂತಾಗಬೇಕು. ಗ್ರಾಮ ಪಂಚಾಯಿತಿಗಳ ಅನುದಾನದಲ್ಲಿ ಶೇ 2 ರಷ್ಟು ಮಕ್ಕಳಿಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು ಅವಕಾಶವಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯತೆ ಹೊಂದಿ ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಆದಷ್ಟು ಶೀಘ್ರವಾಗಿ ಮಾಡಬೇಕು. ಪೌರಕಾರ್ಮಿಕರ ಮಕ್ಕಳ ಸ್ಥಿತಿಗತಿಗಳ ವರದಿಯನ್ನು ನೀಡುವಂತೆ ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಬಾಲಕಾರ್ಮಿಕ, ಫೋಕ್ಸೊ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಎಂ. ಪುರುಷೋತ್ತಮ, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಪೌರಾಯುಕ್ತ ರಾಯಪ್ಪ ಇದ್ದರು.

31 ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ

ಜಿಲ್ಲೆಯಲ್ಲಿ 1522 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ 1051 ಸ್ವಂತ ಕಟ್ಟಡ 31 ಬಾಡಿಗೆ ಕಟ್ಟಡದಲ್ಲಿ ಹಾಗೂ ಉಳಿದಂತೆ ಶಾಲೆಗಳ ಕಟ್ಟಡಗಳಲ್ಲಿ ನಡೆಯುತ್ತಿದೆ. ಸರ್ಕಾರಿ ಉದ್ದೇಶಗಳಿಗೆ ಅಗತ್ಯವಿರುವ ನಿವೇಶನಗಳನ್ನು ಗುರುತಿಸಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಬಾಡಿಗೆ ಕಟ್ಟಡ ಸಮುದಾಯ ಭವನ ಸರ್ಕಾರಿ ಇಲಾಖೆಯ ಖಾಲಿ ಜಾಗಗಳಲ್ಲಿರುವ ಅಂಗನವಾಡಿಗಳಲ್ಲಿ ಸುರಕ್ಷತಾ ಕ್ರಮಗಳ ಕುರಿತು ಗಮನ ಹರಿಸಬೇಕು ಎಂದು ತಿಪ್ಪೇಸ್ವಾಮಿ ಕೆ.ಟಿ. ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT