ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಲುವ ಸೇತುವೆಗೆ ಪ್ರವಾಸಿಗರ ನಿರ್ಬಂಧ

ಪ್ರಕ್ಷುಬ್ಧಗೊಂಡ ಸಮುದ್ರ: ಪ್ರವಾಸಿಗರ ಹಿತದೃಷ್ಟಿಯಿಂದ ಕ್ರಮ
Last Updated 9 ಮೇ 2022, 14:37 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯ ಪ್ರಸಿದ್ಧ ಪ್ರವಾಸಿತಾಣವಾದ ಮಲ್ಪೆ ಬೀಚ್‌ನಲ್ಲಿ ಮೇ 6ರಂದು ಪ್ರವಾಸಿಗರಿಗೆ ಮುಕ್ತವಾಗಿದ್ದ ರಾಜ್ಯದ ಮೊದಲ ತೇಲುವೆ ಸೇತುವೆ ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಹೋಗಿದೆ.

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆ ಸಹಕಾರದೊಂದಿಗೆ ಮಲ್ಪೆ ಬೀಚ್‌ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ಸಂಘಟನೆಗಳು ಖಾಸಗಿಯಾಗಿ ₹ 80 ಲಕ್ಷ ವೆಚ್ಚದಲ್ಲಿ ತೇಲುವ ಸೇತುವೆ ನಿರ್ಮಿಸಿತ್ತು.

100 ಮೀಟರ್ ಉದ್ದ ಹಾಗೂ 3.5 ಮೀಟರ್ ಅಗಲದ ತೇಲುವ ಸೇತುವೆ ಒಮ್ಮೆಗೆ 100 ಮಂದಿ ಸಾಗುವ ಸಾಮರ್ಥ್ಯ ಹೊಂದಿತ್ತು. ಸೇತುವೆಯ ಕೊನೆಯಲ್ಲಿ ಪ್ರವಾಸಿಗರುನಿಂತು ಸಮುದ್ರದ ಅಲೆಗಳ ಸೌಂದರ್ಯವನ್ನು ಆಸ್ವಾದಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಅಲೆಗಳ ಸೌಂದರ್ಯವನ್ನು ತೀರಾ ಹತ್ತಿರದಿಂದ ಕಣ್ತುಂಬಿಕೊಳ್ಳುವ ಹಾಗೂ ಅಲೆಗಳೊಟ್ಟಿಗೆ ಹೆಜ್ಜೆ ಹಾಕುವ ವಿಭಿನ್ನವಾದ ಅನುಭವವನ್ನು ಪ್ರವಾಸಿಗರಿಗೆ ನೀಡಲು ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ದುರದೃಷ್ಟವಶಾತ್ ತೇಲುವ ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧವಾಗಿದೆ.

ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ತರಾತುರಿಯಲ್ಲಿ ತೇಲುವ ಸೇತುವೆ ನಿರ್ಮಿಸುವ ಅಗತ್ಯವಿರಲಿಲ್ಲ. ಸುರಕ್ಷತಾ ಲೋಪಗಳು ಕಾಣಿಸಿಕೊಂಡಿವೆ ಎಂಬ ಟೀಕೆಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ. ಆದರೆ, ಮಲ್ಪೆ ಬೀಚ್ ನಿರ್ವಹಣೆ ಹೊಣೆ ಹೊತ್ತಿರುವ ಸಿಬ್ಬಂದಿ ಸಮುದ್ರದ ಅಲೆಗಳ ಹೊಡೆತಕ್ಕೆ ತೇಲುವೆ ಸೇತುವೆ ತುಂಡಾಗಿಲ್ಲ. ಯಾವ ಪ್ರವಾಸಿಗರ ಪ್ರಾಣಕ್ಕೂ ಕುಂದುಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2 ದಿನಗಳಿಂದ ಸಮುದ್ರ ಪ್ರಕ್ಷುಬ್ದವಾಗಿರುವ ಕಾರಣದಿಂದ ಭಾನುವಾರ ಸಂಜೆ ತೇಲುವ ಸೇತುವೆಗೆ ಹಾಕಲಾಗಿದ್ದ ಪ್ಲಾಸ್ಟಿಕ್ ಬ್ಲಾಕ್‌ಗಳನ್ನು ಬಿಚ್ಚಲಾಗುತ್ತಿತ್ತು. ಈ ದೃಶ್ಯವನ್ನು ಕೆಲವರು ಸೆರೆ ಹಿಡಿದು ತೇಲುವ ಸೇವೆ ತುಂಡಾಗಿದೆ. ಪ್ರವಾಸಿಗರ ಜೀವಕ್ಕೆ ಸುರಕ್ಷತೆ ಇಲ್ಲ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ್ದಾರೆ ಎಂದು ಮಲ್ಪೆ ಬೀಚ್‌ ನಿರ್ವಾಹಕ ಸುದೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಸೇಂಟ್ ಮೇರಿಸ್ ಐಲ್ಯಾಂಡ್‌ಗೂ ಪ್ರವೇಶ ನಿರ್ಬಂಧಿಸಲಾಗಿದೆ. ಮಲ್ಪೆ ಬೀಚ್‌ನಲ್ಲಿ ವಾಟರ್ಸ್ ಸ್ಪೋರ್ಟ್ಸ್‌ಗಳನ್ನು ನಿಲ್ಲಿಸಲಾಗಿದೆ. ಸಮುದ್ರಕ್ಕಿಳಿಯಲು ಪ್ರವಾಸಿಗರಿಗೆ ಅನುಮತಿ ನೀಡಲಾಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದ ಮೊದಲ ತೂಗುವ ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ನೀರು ಪಾಲಾಗಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆಗಾಲ ಮುಗಿದ ಬಳಿಕ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ತೇಲುವ ಸೇತುವೆಯನ್ನು ನಿರ್ಮಿಸಬೇಕು ಎಂಬುದು ಪ್ರವಾಸಿಗರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT