ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬಂದರಿನಲ್ಲಿ ಲಸಿಕಾ ಕೇಂದ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ: ಶಾಸಕ ರಘುಪತಿ ಭಟ್‌
Last Updated 9 ಆಗಸ್ಟ್ 2021, 15:55 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆಯ ಬಂದರಿನಲ್ಲಿ ಮೀನುಗಾರರಿಗೆ ಪ್ರತ್ಯೇಕ ಕೋವಿಡ್‌ ಲಸಿಕಾ ಕೇಂದ್ರ ತೆರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವುದಾಗಿ ಶಾಸಕ ರಘುಪತಿ ಭಟ್ ತಿಳಿಸಿದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕಿಳಿದರೆ 10 ರಿಂದ 12 ದಿನ ಬಂದರಿಗೆ ಮರಳುವುದಿಲ್ಲ. ಮೀನುಗಾರರಿಗೆ ಕೋವಿಡ್‌ ಲಸಿಕೆ ಅಗತ್ಯವಾಗಿರುವುದರಿಂದ ಬಂದರಿನಲ್ಲಿ ಲಸಿಕಾ ಕೇಂದ್ರ ತೆರೆಯಲು ಸಿಎಂಗೆ ಮನವಿ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ 15 ರಿಂದ 20 ಸಾವಿರ ಮೀನುಗಾರರಿದ್ದು, ಲಭ್ಯವಿರುವ ಲಸಿಕೆಯಲ್ಲಿ ಎಲ್ಲರಿಗೂ ಹಾಕಲು ಸಾಧ್ಯವಿಲ್ಲ. ಹಾಗಾಗಿ ಮೀನುಗಾರರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಿ ಬಂದರಿನಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ನಗರದಲ್ಲಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಸರ್ಕಾರ ಸಂಪೂರ್ಣವಾಗಿ ವಹಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನೌಕರರ ಸಂಪೂರ್ಣ ವೇತನವನ್ನು ಸರ್ಕಾರವೇ ಭರಿಸಲಿದೆ ಎಂದು ಶಾಸಕರು ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆಗೆ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ₹ 90 ಲಕ್ಷ ಬಾಕಿ ಬರಬೇಕಿದೆ. ಈ ಸಂಬಂಧ ಟ್ರಸ್ಟ್‌ನ ಸಿಇಒ ಬಳಿ ಮಾತನಾಡಿದ್ದು, ₹ 20 ಲಕ್ಷ ಬಿಡುಗಡೆ ಮಾಡಿದ್ದಾರೆ. ಈ ಮೊತ್ತವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ‘ಡಿ’ ದರ್ಜೆಯ ನೌಕರರಿಂದ ಹಿಡಿದು ಎಲ್ಲ ಸಿಬ್ಬಂದಿಗೂ ಹಂಚಿಕೆ ಮಾಡಲಾಗುವುದು. ಟ್ರಸ್ಟ್ ಹಣ ಬಿಡುಗಡೆ ಮಾಡಿದ ನಂತರ ಬಾಕಿ ವೇತನವನ್ನು ಬಿಡುಗಡೆ ಮಾಡಲಾಗುವುದು ಎಂದರು.

ಆಸ್ಪತ್ರೆಯ ನೌಕರರು ಮುಷ್ಕರ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಅಗತ್ಯವಿಲ್ಲ. ಮುಷ್ಕರ ಮಾಡಿದರೆ ರೋಗಿಗಳಿಗೆ ಸಮಸ್ಯೆ ಆಗಲಿದೆ. ಗುರುವಾರ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT