ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳ ಮೂಲಕ ಹಾಸ್ಟೆಲ್‌ ನಿರ್ವಹಣೆಗೆ ಚಿಂತನೆ ಇತ್ತು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಚೆಸ್‌ ಚಾಂಪಿಯನ್‌ಶಿಪ್‌ ಉದ್ಘಾಟನಾ ಸಮಾರಂಭ
Last Updated 20 ಸೆಪ್ಟೆಂಬರ್ 2019, 13:39 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಸಾವಿರಾರು ಸರ್ಕಾರಿ ವಸತಿ ನಿಲಯಗಳಿದ್ದು, ಮೂಲಸೌಕರ್ಯ ಸಮಸ್ಯೆಗಳಿವೆ. ಹಾಗಾಗಿ, ಮಠ ಮಂದಿರಗಳಿಗೆ ಅನುದಾನ ಬಿಡುಗಡೆ ಮಾಡಿ ವ್ಯವಸ್ಥಿತ, ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಹಾಸ್ಟೆಲ್‌ಗಳನ್ನು ನಡೆಸಬಹುದೇ ಎಂಬ ಚಿಂತನೆ ನಡೆಸಲಾಗಿತ್ತು. ಆದರೆ, ಆಹಾರ ಪದ್ಧತಿ ಹಾಗೂ ಇತರ ಕಾರಣಗಳಿಂದ ಹಿಂದೆ ಸರಿಯಬೇಕಾಯಿತು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯಿಂದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಚೆಸ್‌ ಚಾಂಪಿಯನ್‌ ಷಿಪ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ, ಯಾದಗಿರಿ, ವಿಜಾಪುರ, ಕಲಬುರ್ಗಿಯಂತಹ ಹಿಂದುಳಿದಿರುವ ಜಿಲ್ಲೆಗಳಲ್ಲಿ ಶಿಕ್ಷಣದ ಮಟ್ಟ ಕುಸಿದಿದೆ. ಆರೋಗ್ಯದ ಮಟ್ಟವೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ ಎಂದರು.

ರಾಜ್ಯದಲ್ಲಿ ಸಿದ್ಧಗಂಗಾ ಮಠ ಸೇರಿದಂತೆ ಅನೇಕ ಮಠ–ಮಂದಿರಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಜಾತಿ, ಮತ, ಧರ್ಮ, ವರ್ಗವನ್ನು ಮೀರಿ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪುಗೊಳಿಸುತ್ತಿವೆ. ಹಾಗಾಗಿ ಮಠ, ಮಂದಿರಗಳ ಮೂಲಕ ಹಿಂದುಳಿದಿರುವ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಹಾಸ್ಟೆಲ್‌ಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬಹುದೇ ಎನ್ನುವುದರ ಬಗ್ಗೆ ಯೋಚಿಸಲಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅದಮಾರು ಮಠ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಬುದ್ಧಿ ಮತ್ತು ಮನಸ್ಸನ್ನು ಚುರುಕಾಗಿಸುವ ಆಟವೇ ಚದುರಂಗ. ದೇಹಕ್ಕೆ ಕೆಲಸ ಕೊಡದಿದ್ದರೆ ಕಾಯಿಲೆ ಬರುತ್ತದೆ. ಮನಸ್ಸಿಗೆ ಕೆಲಸ ಕೊಡದಿದ್ದರೆ ತುಕ್ಕು ಹಿಡಿಯುತ್ತದೆ. ದೇಹ ಆರೋಗ್ಯವಾಗಿದ್ದು, ಮನಸ್ಸು ತುಕ್ಕು ಹಿಡಿದರೆ ಉಪಯೋಗವಿಲ್ಲ. ಹಾಗಾಗಿ ಚದುರಂಗ ಆಟದ ಮೂಲಕ ಮನಸ್ಸನ್ನು ಚುರುಕಾಗಿಸಬೇಕು ಎಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಗೌರವ ಕಾರ್ಯದರ್ಶಿ ಡಾ. ಜಿ.ಎಸ್‌.ಚಂದ್ರಶೇಖರ್‌, ಗೌರವ ಕೋಶಾಧಿಕಾರಿ ಪ್ರದೀಪ್‌ ಕುಮಾರ್‌, ಮಂಗಳೂರು ವಿವಿಯ ನಿರೀಕ್ಷಕ ಗಣೇಶ್‌ ಕೋಟ್ಯಾನ್‌, ಡೆರಿಕ್‌ ಚೆಸ್‌ ಸ್ಕೂಲ್‌ನ ನಿರ್ದೇಶಕ ಡೆರಿಕ್‌ ಪಿಂಟೋ, ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್‌ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕ ಡಾ. ವಿ. ಭರತ್‌ ಸ್ವಾಗತಿಸಿದರು. ಪಿಐಎಂ ಮುಖ್ಯಸ್ಥ ಡಾ. ಸುರೇಶರಮಣ ಮಯ್ಯ ವಂದಿಸಿದರು. ಪಿಐಎಂನ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಕಾರಂತ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT