ಉಡುಪಿ: ಮಣಿಪಾಲದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶ ಮಾಡಿ, ಕೊಠಡಿಯ ಕಿಟಕಿಯಿಂದ ಕೈಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಶಿವಳ್ಳಿ ಗ್ರಾಮದ ನವೀನ್ ನಾಯ್ಕ್ (22) ಬಂಧಿತ ಆರೋಪಿ. ಈತ ಸೆಪ್ಟೆಂಬರ್ 1ರಂದು ರಾತ್ರಿ 2.15ರ ಸುಮಾರಿಗೆ ವಸತಿನಿಲಯಕ್ಕೆ ಪ್ರವೇಶಿಸಿ ಕಿರುಕುಳ ನೀಡಿ ಪರಾರಿಯಾಗಿದ್ದ.
ಮಣಿಪಾಲ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್.ಟಿ.ವಿ ನೇತೃತ್ವದಲ್ಲಿ ಪಿಎಸ್ಐ ರಾಘವೇಂದ್ರ, ಪಿಎಸ್ಐ ಅಕ್ಷಯ ಕುಮಾರಿ, ಎಎಸ್ಐ ವಿವೇಕ್, ಸಿಬ್ಬಂದಿ ಇಮ್ರಾನ್, ಪ್ರಸನ್ನ, ರಘು, ಮಂಜುನಾಥ ಹಾಗೂ ಜ್ಯೋತಿ ಅವರನ್ನೊಳಗೊಂಡ ತಂಡವು ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿಯಿಂದ ಬಂಧಿಸಿದೆ.
ಆರೋಪಿಯು 2023ರಲ್ಲಿ ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.