ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗ ತಾರತಮ್ಯ ವಿರುದ್ಧ ಗಟ್ಟಿ ಧನಿ ಎತ್ತಿ’

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ
Last Updated 8 ಮಾರ್ಚ್ 2022, 14:56 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜುಕೇಷನ್‌ನಲ್ಲಿ (ಮಾಹೆ) ಮಂಗಳವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರಿಗೆ ಗೌರವಿಸಲಾಯಿತು.

‘ಪಕ್ಷಪಾತವನ್ನು ಹೊಡೆದುಹಾಕಿ’ ಎಂಬ ಅಂತರರಾಷ್ಟ್ರೀಯ ಮಹಿಳಾ ದಿನದ ಘೋಷ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿ, ಸಮಾಜದಲ್ಲಿ ಲಿಂಗ ತಾರತಮ್ಯ ಆಳವಾಗಿ ಬೇರೂರಿದ್ದು, ಮನೆ, ಕಚೇರಿ, ಸಮಾಜದೊಳಗೆ ಹಾಸುಹೊಕ್ಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗ ತಾರತಮ್ಯದ ವಿರುದ್ಧ ಮಹಿಳೆಯರು ಗಟ್ಟಿಯಾಗಿ ಧನಿ ಎತ್ತಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ತಾರತಮ್ಯ, ಅವಮಾನವನ್ನು ಸಹಿಸಿಕೊಂಡಷ್ಟು ಹೆಚ್ಚಾಗುತ್ತಲೇ ಹೋಗುತ್ತದೆ.ಅಂತರರಾಷ್ಟ್ರೀಯ ಮಹಿಳಾ ದಿನ ಮಹಿಳೆಯರಿಗೆ ತಾರತಮ್ಯದ ವಿರುದ್ಧ ಹೋರಾಡುವ ಶಕ್ತಿ ಸಿಗಲಿ ಎಂದು ಆಶಿಸಿದರು.

ಮಾಹೆ ಟ್ರಸ್ಟಿ ವಾಸಂತಿ ಪೈ ಮಾತನಾಡಿ, ಕೋವಿಡ್‌ ಕಾರಣದಿಂದ ಕಳೆದ 2021 ಸವಾಲಿನ ವರ್ಷವಾಗಿದ್ದರೂ ಮಹಿಳೆಯರು ಧೈರ್ಯವಾಗಿ ಸಂಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ದೃತಿಗೆಡದೆ ಗುರಿ ತಲುಪಿದ್ದಾಳೆ ಎಂದರು.

ಇಂದಿರಾ ಎಸ್‌.ಬಲ್ಲಾಳ್ ಮಾತನಾಡಿ, ಲಿಂಗ ತಾರತಮ್ಯದ ವಿರುದ್ಧ ಮಹಿಳೆಯರು ಯಾವುದೇ ಹಿಂಜರಿಕೆ ಇಲ್ಲದೆ ಧನಿ ಎತ್ತಿದರೆ ಮಾತ್ರ ಸಾಧನೆಯ ಶಿಖರವೇರಬಹುದು. ಸಮಾಜದಲ್ಲಿ ಸುರಕ್ಷತೆ ಹಾಗೂ ಸಮಾನತೆ ಸಾಧಿಸಬಹುದು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದಂದು ಎಲ್ಲರೂ ಸಂಕಲ್ಪ ಮಾಡೋಣ ಎಂದರು.

ಪ್ರೊ.ಪಾರ್ವತಿ ಜಿ.ಐತಾಳ್ ಮಾತನಾಡಿ, ಮಹಿಳೆ ಶಿಕ್ಷಣದಿಂದ ಸಾಮಾಜಿಕ ಹಕ್ಕುಗಳನ್ನು, ಉದ್ಯೋಗದಿಂದ ಆರ್ಥಿಕವಾಗಿ ಸಬಲತೆ ಹಾಗೂ ಕಡ್ಡಾಯ ಮತದಾನ ಹಾಗೂ ರಾಜಕೀಯ ಆಡಳಿತದಲ್ಲಿ ಭಾಗವಹಿಸುವಿಕೆಯಿಂದ ರಾಜಕೀಯ ಹಕ್ಕುಗಳನ್ನು ಪಡೆಯಬಲ್ಲಳು ಎಂದು ಕಿವಿಮಾತು ಹೇಳಿದರು.

ಮಹಿಳೆ ಜೀವನದ ಪ್ರತಿ ಹಂತದಲ್ಲೂ ತಾರತಮ್ಯವನ್ನು ಎದುರಿಸುತ್ತಿದ್ದಾಳೆ. ಕುಟುಂದೊಳಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಮಹಿಳಾ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಲಿಂಗ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞೆ ಕುಸುಮಾ ವೆಂಕಟೇಶ್ ಮಾತನಾಡಿದರು. ನೃತ್ಯಗಾರ್ತಿ ಹಾಸಿನಿ ಉಪಾಧ್ಯಾಯ, ಯಕ್ಷಗಾನ ಕಲಾವಿದೆ ಮೂಕಾಂಬಿಕಾ ವಾರಂಬಳ್ಳಿ, ಅಂಗನವಾಡಿ ಕಾರ್ಯಕರ್ತೆ ಶಾರದಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಾಸಿನಿ ಉಪಾಧ್ಯಾಯ ಹಾಗೂ ಅರ್ಚನಾ ಜೈವಿಠ್ಠಲ್‌ ನೃತ್ಯ ಪ್ರದರ್ಶಿಸಿದರು.

ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಬಲ್ಲಾಳ್‌, ಸಹ ಕುಲಪತಿ ಡಾ.ಎಂ.ಡಿ.ವೆಂಕಟೇಶ್‌, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಯಿತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT