ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಣ್ಣಪಳ್ಳದಲ್ಲಿ ಕ್ರಾಫ್ಟ್‌ ವಿಲೇಜ್

ಯೋಜನೆಯ ರೂಪುರೇಷೆ ಸಿದ್ದಪಡಿಸಲು ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ
Last Updated 4 ಸೆಪ್ಟೆಂಬರ್ 2022, 12:40 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದಲ್ಲಿರುವ ಮಣ್ಣಪಳ್ಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕ್ರಾಫ್ಟ್‌ ವಿಲೇಜ್ ಮಾಡುವ ಬಗ್ಗೆ ಅಗತ್ಯ ರೂಪುರೇಷೆ ಸಿದ್ಧಪಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃಧ್ದಿ ಸಮಿತಿ ಸಭೆಯಲ್ಲಿ ಮಾತನಾಡಿ, ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ ಮತ್ತು ಕರಕುಶಲ ವಸ್ತುಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆ ಮೂಲಕ ದೆಹಲಿ ಹಾತ್ ಮಾದರಿಯಲ್ಲಿ ಕ್ರಾಫ್ಟ್‌ ವಿಲೇಜ್ ಮಾಡಬಹುದಾಗಿದೆ. ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ರೂಪು ರೂಪುರೇಷೆ ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಬೇಕು. ಅರಣ್ಯಗಳಲ್ಲಿ ಟ್ರಕ್ಕಿಂಗ್‌ಗೆ ಅವಕಾಶ ನೀಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾದ್ಯವಿದ್ದು, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಪರಿಶೀಲಿಸಬೇಕು ಎಂದರು.

ಪಡುಬಿದ್ರೆ ಕಡಲ ತೀರದಲ್ಲಿ ಸೈಕಲ್ ಸರ್ಕ್ಯೂಟ್ ಮತ್ತು ಕುಂದಾಪುರದ ಕೋಡಿ ಬೀಚ್‌ನಿಂದ ಕೋಡಿತಲೆ ಡೆಲ್ಟಾ ಪಾಯಿಂಟ್‌ವರೆಗೆ ಸೈಕಲ್ ಟ್ರಾಕ್ ನಿರ್ಮಾಣ, ಕುಂದಾಪುರ ಕೋಡಿ ಸೀ ವಾಕ್ ಬಳಿ ಮೂಲಸೌಕರ್ಯ ಅಭಿವೃದ್ಧಿಕಾಮಗಾರಿ ಹಾಗೂ ಕುಂದಾಪುರ ಸೀ ವಾಕ್‌ನಿಂದ ಗಂಗೋಳ್ಳಿ ಸೀ ವಾಕ್‌ಗೆ ಸಂಪರ್ಕ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಿ ಎಂದರು.

ಜಿಲ್ಲೆಯಲ್ಲಿ ಹೋಂ ಸ್ಟೇಗಳ ನಿರ್ಮಾಣಕ್ಕೆ ಪೊಲೀಸ್ ಅಧೀಕ್ಷಕರಿಂದ ನಿರಾಕ್ಷೇಪಣ ಪತ್ರ ಪಡೆಯುವಲ್ಲಿ ವಿಳಂವಾಗುತ್ತಿದ್ದು, ಸಂಬಂದಪಟ್ಟ ವ್ಯಾಪ್ತಿಯಲ್ಲಿರುವ ಇನ್‌ಸ್ಪೆಕ್ಟರ್‌ಗಳಿಂದ ನಿರಾಕ್ಷೇಪಣ ಪತ್ರ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸೇಂಟ್ ಮೇರಿಸ್ ದ್ವೀಪದ ಬಳಿ ₹4.20 ಕೋಟಿ ವೆಚ್ಚದಲ್ಲಿ ಫೆರ‍್ರಿ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಸರ್ವೇ ಕಾರ್ಯ ಮುಗಿದಿದ್ದು, ಸಿಆರ್‌ಝಡ್ ವತಿಯಿಂದ ನಿರಾಪೇಕ್ಷಣಾ ಪತ್ರ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ, ತ್ರಾಸಿ ಮರವಂತೆ ಕಡಲ ತೀರದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯಲಿದ್ದು, ₹2.5 ಕೋಟಿ ಬಿಡುಗಡೆಯಾಗಿದೆ. ₹15 ಕೋಟಿ ವೆಚ್ಚದಲ್ಲಿ ಪಡುವರಿ ಸೋಮೇಶ್ವರ ಬೀಚ್ ಅಭಿವೃದ್ಧಿ ಕಾಮಗಾರಿಗೆ ₹ 3 ಕೋಟಿ ಬಿಡುಗಡೆಯಾಗಿದೆ. ಎಲ್ಲ ಕಾಮಗಾರಿಗಳಿಗೆ ಡಿಪಿಆರ್ ತಯಾರಿಸಲಾಗಿದೆ. ಕಾರ್ಕಳದ ಉಮಿಕಲ್ ಕುಂಜಬೆಟ್ಟದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಶುರಾಮ ಥೀಂ ಪಾರ್ಕ್ ಆಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ವಿವಿಧ
ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT