ಶನಿವಾರ, ಫೆಬ್ರವರಿ 22, 2020
19 °C
ಕೇಂದ್ರಗಳಲ್ಲಿ ಹಸಿ ಮೀನು ಮಾರಾಟಕ್ಕೆ ನಿರ್ಧಾರ: ತಿಂಗಳೊಳಗೆ ಆರಂಭ

11 ಕಡೆ ಮತ್ಸ್ಯದರ್ಶಿನಿ ಆರಂಭ: ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯ ಮೀನಿನ ಖಾದ್ಯಗಳ ರುಚಿ ಪ್ರತಿಯೊಬ್ಬರೂ ಸವಿಯಬೇಕು ಎಂಬ ಉದ್ದೇಶದಿಂದ ರಾಜ್ಯದ 11 ಕಡೆಗಳಲ್ಲಿ ‘ಮತ್ಸ್ಯದರ್ಶಿನಿ’ ಆರಂಭಕ್ಕೆ ಸಿದ್ಧತೆಗಳು ನಡೆದಿವೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಅಂದಾಜು ತಲಾ ₹50 ಲಕ್ಷ ವೆಚ್ಚದಲ್ಲಿ ಮತ್ಸ್ಯದರ್ಶಿನಿ ಆರಂಭಕ್ಕೆ ಯೋಜನೆ ಸಿದ್ಧವಾಗಿದ್ದು, ಸರ್ಕಾರದಿಂದ ಹಣ ಕೂಡ ಮಂಜೂರಾಗಿದೆ. ಡೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಕ್ಕೆ ತರಲಾಗುವುದು. ಮುಂದಿನ ತಿಂಗಳು ಹೋಟೆಲ್‌ಗಳು ಆರಂಭವಾಗಲಿವೆ ಎಂದು ತಿಳಿಸಿದರು.

ಸದ್ಯ ಕೆಲವು ಕಡೆ ಸರ್ಕಾರದ ಕಟ್ಟಡಗಳಿದ್ದು, ಅವುಗಳನ್ನೇ ಮತ್ಸ್ಯದರ್ಶಿನಿ ಕೇಂದ್ರಗಳನ್ನಾಗಿ ಬದಲಿಸುವ ಉದ್ದೇಶವಿದೆ. ಕೆಲವು ಕಡೆ ಬಾಡಿಗೆ ಪಡೆಯಲಾಗುವುದು. ಮತ್ಸ್ಯದರ್ಶಿನಿಗಳನ್ನು ಸರ್ಕಾರದಿಂದ ನಡೆಸಲು ಸಾಧ್ಯವಾಗದಿದ್ದರೆ, ಖಾಸಗಿಯವರಿಗೆ ವಹಿಸಲಾಗುವುದು. ಖಾದ್ಯಗಳ ಬೆಲೆಯನ್ನು ಮಾತ್ರ ಸರ್ಕಾರವೇ ನಿಗಧಿ ಮಾಡಲಿದೆ ಎಂದು ಸಚಿವರು ಹೇಳಿದರು.

ಈಗಾಗಲೇ ಶಿವಮೊಗ್ಗ, ಬೆಂಗಳೂರಿನಲ್ಲಿ ಮತ್ಸ್ಯದರ್ಶಿನಿ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಈಗ ಮೈಸೂರು, ಬೆಳಗಾವಿ, ತುಮಕೂರು, ಉಡುಪಿ, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ವಿಜಯಪುರ, ಬೆಂಗಳೂರು ಉತ್ತರ ಕನ್ನಡದಲ್ಲಿ ಮತ್ಸ್ಯದರ್ಶಿನಿ ತೆರೆಯಲಾಗುವುದು. ಯೋಜನೆಯ ಯಶಸ್ಸು ಆಧರಿಸಿ ಮುಂದಿನ ವರ್ಷ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕಡಿಮೆ ಬೆಲೆಗೆ ಮೀನಿನ ಖಾದ್ಯ

ಸದ್ಯ ಐಶಾರಾಮಿ ಹೋಟೆಲ್‌ಗಳಲ್ಲಿ ₹800 ರಿಂದ 900ಕ್ಕೆ ಸಿಗುತ್ತಿರುವ ಮೀನಿನ ಖಾದ್ಯಗಳು, ಮತ್ಸ್ಯದರ್ಶಿನಿಯಲ್ಲಿ ₹100 ರಿಂದ ₹110ರ ದರದಲ್ಲಿ ಸಿಗಲಿದೆ. ಮಲ್ಪೆ ಹಾಗೂ ಮಂಗಳೂರಿನಿಂದ ಮೀನುಗಳನ್ನು ಖರೀದಿಸಿ ಮತ್ಯ್ಯದರ್ಶನಿಗಳಿಗೆ ಸರಬರಾಜು ಮಾಡುವುದರಿಂದ ಶುಚಿ–ರುಚಿಯಾಗಿರಲಿದೆ ಎಂದರು.

ಹಸಿ ಮೀನು ಮಾರಾಟ

ಮತ್ಸ್ಯದರ್ಶಿನಿ ಕೇಂದ್ರಗಳಲ್ಲಿಯೇ ಹಸಿ ಮೀನು ಮಾರಾಟಕ್ಕೂ ಚಿಂತನೆ ನಡೆದಿದೆ. ಕರಾವಳಿಯಿಂದ ಆನ್‌ಲೈನ್‌ ಮೂಲಕ ಮೀನುಗಳನ್ನು ಖರೀದಿಸಿ, ಗ್ರಾಹಕರ ಕೈಗೆಟುಕುವಂತೆ ಬೆಲೆ ನಿಗಧಿಗೊಳಿಸಿ ಎಲ್ಲ ಕೇಂದ್ರಗಳಿಗೆ ಪೂರೈಸಲಾಗುವುದು. ಇದರಿಂದ ಕರಾವಳಿಯ ಮತ್ಸ್ಯೋದ್ಯಮ ಕೂಡ ಅಭಿವೃದ್ಧಿಯಾಗಲಿದೆ ಎಂದು ಕೋಟ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು