ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಸಮಿತಿಗೆ ವಾಸ್ತುಶಿಲ್ಪಿಯ ನೇಮಿಸಿ

ಕಾಮಗಾರಿ ಪ್ರವಾಸಿಗರ ಸೆಳೆಯುವಂತಿರಲಿ: ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆ
Last Updated 18 ಮಾರ್ಚ್ 2020, 12:40 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಾಮಗಾರಿಗಳು ಪ್ರವಾಸಿಗರನ್ನು ಸೆಳೆಯುವಂತಿರಬೇಕು. ಈ ನಿಟ್ಟಿನಲ್ಲಿ ವಿಭಿನ್ನ ವಿನ್ಯಾಸದ ಯೋಜನೆ ಸಿದ್ಧಪಡಿಸಲು ಜಿಲ್ಲಾ ಸಮಿತಿಗೆ ವಾಸ್ತುಶಿಲ್ಪಿ ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ಪ್ರವಾಸಿ ತಾಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀಚ್‍ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳು ಏಕರೂಪದ ಬದಲಾಗಿ ಆಕರ್ಷಕವಾಗಿರುವಂತೆ ವಿನ್ಯಾಸಗೊಳಿಸಬೇಕು. ಹೊಸ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ವಾಸ್ತುಶಿಲ್ಪಿಗಳ ಸಲಹೆಯಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ಬೀಚ್‍ಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಮಾರ್ಚ್ 31ರೊಳಗೆ ಮುಕ್ತಾಯಗೊಳಿಸಬೇಕು ಎಂದು ಡಿಸಿ ಆದೇಶಿಸಿದರು.

2019-2020ನೇ ಸಾಲಿನ ಕೆಟಿವಿಜಿ ಶಿಫಾರಸ್ಸಿನಡಿಯ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು. ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಕಾಮಗಾರಿಗಳ ಯೋಜನಾ ವಿವರ ಮತ್ತು ವೆಚ್ಚದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸಮಿತಿಯ ವರದಿಯ ಕರಡು ಪ್ರತಿ ಸಿದ್ಧಪಡಿಸಿ ಕೂಡಲೇ ಸಲ್ಲಿಸಿ. 13 ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗುತ್ತಿದ್ದು, ವಾಹನಗಳ ಮೇಲೆ ಪ್ರವಾಸೋದ್ಯಮ ಇಲಾಖೆಯ ಸ್ಟಿಕ್ಕರ್ಸ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಾಪು ಬೀಚ್‍ನ ಟೆಂಡರ್ ಅವಧಿ ಮುಕ್ತಾಯವಾಗಿದ್ದು, ಹೊಸ ಟೆಂಡರ್ ಕರೆಯಬೇಕು ಎಂದು ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಜಲ ಹಾಗೂ ಸಾಹಸ ಕ್ರೀಡೆಗಳಿಗೆ ಒತ್ತು ನೀಡಿ. ಫ್ಯಾಮ್ ಟ್ರಿಪ್‍ ಆಯೋಜಿಸಿ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸಿ. ಕರಾವಳಿ ಖಾದ್ಯಗಳ ಆಹಾರ ಉತ್ಸವ ದೊಡ್ಡ ಮಟ್ಟದಲ್ಲಿ ನಡೆಯಲು ಕ್ರಮಕೈಗೊಳ್ಳಬೇಕು.

ಸೇಂಟ್‌ ಮೇರಿಸ್‌ ದ್ವೀಪದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ ಮಳೆಗಾಲ ಆರಂಭಕ್ಕೂ ಮುನ್ನ ತೆಂಗಿನ ಸಸಿಗಳನ್ನು ನೆಡಬೇಕು. ಅಪಾಯದ ಪ್ರದೇಶಗಳಲ್ಲಿ ಎಚ್ಚರಿಕೆಯ ಫಲಕ, ಫ್ಲ್ಯಾಗ್‍ ಅಳವಡಿಕೆ ಹಾಗೂ ಬೇಲಿ ನಿರ್ಮಿಸಿ ಎಂದು ಸೂಚಿಸಿದರು.‌

ಅರ್ಬನ್ ಆರ್ಕಿಟೆಕ್ಟ್ ಪ್ರತಿಮಾ ಮನೋಹರ್ ಅವರು ಬೀಚ್‍ಗಳಲ್ಲಿ ವಾಟರ್ ಫ್ರಂಟ್ ಮತ್ತು ಬೀಚ್ ಫ್ರಂಟ್ ಯೋಜನೆ ಜಾರಿಗೊಳಿಸುವುದು ಹಾಗೂ ಮಾದರಿ ಬೀಚ್‍ಗಳ ನಿರ್ಮಾಣ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಕುಂದಾಪುರ ಎಸಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯ್ಕ್‌, ಪೌರಾಯುಕ್ತ ಆನಂದ ಕಲ್ಲೋಳಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT