ಉಡುಪಿ: 2023ರೊಳಗೆ ಉಡುಪಿಯಲ್ಲಿ ನೂತನ ಜಿಲ್ಲಾ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಬುಧವಾರ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲಿಸಿ ಮಾತನಾಡಿದ ಸಚಿವರು, ಜಿಲ್ಲಾ ಆಸ್ಪತ್ರೆ ನಿರ್ಮಾಣ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಆದೇಶ ಪತ್ರ ಕೊಡುವುದು ಮಾತ್ರ ಬಾಕಿ ಇದೆ. ಆಗಸ್ಟ್ 15ರೊಳಗೆ ಶಂಕುಸ್ಥಾಪನೆ ನೆರವೇರಲಿದ್ದು, 15 ತಿಂಗಳಲ್ಲಿ ಸುಸಜ್ಜಿತ ಆಸ್ಪತ್ರೆಯ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದರು.
ಸರ್ಕಾರದಿಂದಲೇ ನಿರ್ವಹಣೆ: ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉಡುಪಿ ನಗರದಲ್ಲಿ ನಿರ್ಮಾಣವಾಗಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ವಹಣೆ ಮಾಡುವುದು ಸಾದ್ಯವಿಲ್ಲ ಎಂದು ಬಿ.ಆರ್. ಶೆಟ್ಟಿ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ.
200 ಬೆಡ್‌ಗಳ ಪಿಪಿಪಿ ಮಾದರಿಯ ಆಸ್ಪತ್ರೆಯ ನಿರ್ವಹಣೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಹಾಗೂ ಆಸ್ಪತ್ರೆ ಎದುರಿಗಿರುವ 2 ಎಕರೆ ಜಾಗವನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಮುಂದಿನ ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಅತ್ಯಾಧುನಿಕ ಮಾದರಿಯ ಆಸ್ಪತ್ರೆಯನ್ನು ನಿರ್ವಹಣೆ ಮಾಡುವುದು ಸರ್ಕಾರಕ್ಕೆ ದೊಡ್ಡ ಹೊರೆಯಲ್ಲ. ಈಗಾಗಲೇ ಜಯದೇವ, ಕಿದ್ವಾಯಿ ಸೇರಿದಂತೆ 18 ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕಾಲೇಜುಗಳು ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಉಡುಪಿಯ ಬಿ.ಆರ್ ಶೆಟ್ಟಿ ಆಸ್ಪತ್ರೆಯನ್ನೂ ನಿರ್ವಹಣೆ ಮಾಡುವ ಸಂಬಂಧ ತೀರ್ಮಾನಿಸಲಾಗುವುದು ಎಂದರು.
ಮೂರನೇ ಅಲೆ ಬರುತ್ತದೆಯೋ ಇಲ್ಲವೋ ಎಂಬುದು ಜನರ ನಡವಳಿಕೆಯ ಮೇಲೆ ನಿರ್ಧಾರವಾಗಿದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಮೂರನೇ ಅಲೆ ತಡೆಯಬಹುದು. ಜನರು ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಔಷಧಗಳ ಕೊರತೆ ಇಲ್ಲ. ಜಿಲ್ಲೆಗೆ ಅಗತ್ಯವಿರುವ ಮಕ್ಕಳ ತಜ್ಞರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಈ ಸಂದರ್ಭ ಶಾಸಕ ಕೆ.ರಘುಪತಿ ಭಟ್, ಡಿಎಚ್‌ಒ ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.