ಉಡುಪಿ: ರಾಜ್ಯದ ಸಣ್ಣ ರೈತರು, ಕೂಲಿ ಕಾರ್ಮಿಕರು, ಬಡವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುವ ಆರನೇ ಗ್ಯಾರಂಟಿ ಜಾರಿಗೆ ರಾಜ್ಯ ಸರ್ಕಾರ ತಯಾರಿ ನಡೆಸಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಜಾರಿಗೆ ತಂದಿರುವ ಐದು ಗ್ಯಾರಂಟಿಗಳೂ ಸಂಪೂರ್ಣವಾಗಿ ವಿಫಲವಾಗಿವೆ ಎಂದರು.
ಪ್ರತಿ ಗ್ರಾಮದ 400ಕ್ಕಿಂತಲೂ ಹೆಚ್ಚು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳ ಪಟ್ಟಿಯನ್ನು ಪರಿಶೀಲನೆಗೆ ಸ್ಥಳೀಯ ಪಡಿತರ ಅಂಗಡಿಗಳಿಗೆ ಕಳುಹಿಸಿದ್ದು, ಬಡವರ ಬಿಪಿಎಲ್ ಪಡಿತರ ಚೀಟಿ ರದ್ದಾಗುವ ಭೀತಿ ಎದುರಾಗಿದೆ. ಸರ್ಕಾರ ಈ ಕುರಿತು ಪುನರ್ ಪರಿಶೀಲನೆ ಮಾಡದೆ ಏಕಾಏಕಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದರೆ, ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಉಡುಪಿ ತಾಲ್ಲೂಕಿನಲ್ಲಿ 11,250, ಬ್ರಹ್ಮಾವರ ತಾಲ್ಲೂಕಿನಲ್ಲಿ 5,700 ಸೇರಿದಂತೆ ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ನಾಲ್ಕು ತಿಂಗಳುಗಳಾಗಿವೆ. ಅನ್ನಭಾಗ್ಯದ ಅಕ್ಕಿಯೂ ಇಲ್ಲ ಅದರ ಹಣವೂ ಪಾವತಿಯಾಗಿಲ್ಲ. ವಿದ್ಯುತ್ ಬಿಲ್ ಏರಿಕೆಯಿಂದ ಜನರಿಗೆ ತೊಂದರೆಯಾಗಿದೆ ಎಂದರು.
ಉಡುಪಿ ನಗರದ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಪಾವತಿಸದೆ, ಮೆಸ್ಕಾಂನವರು ಸಂಪರ್ಕ ಕಡಿತಗೊಳಿಸಿದ್ದಾರೆ. ಮೆಸ್ಕಾಂನಿಂದ ಶಾಲಾ– ಕಾಲೇಜುಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಸೇವೆ ವ್ಯತ್ಯಯಗೊಂಡಿದೆ ಎಂದು ಯಶ್‌ಪಾಲ್ ಆರೋಪಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಶ್ಯಾಮ್ ಪ್ರಸಾದ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.