ಹೆಬ್ರಿ: ರೈತರನ್ನು ಮಂಗಗಳ ಕಾಟದಿಂದ ರಕ್ಷಿಸಲು ಮಂಕಿ ಪಾರ್ಕ್ ಸ್ಥಾಪಿಸಲು ಶೀಘ್ರವೇ ತಜ್ಞರ ಸಮಿತಿ ರಚಿಸಲಾಗುತ್ತದೆ. ರೈತರ ಹಲವು ವರ್ಷದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಶನಿವಾರ ಹೆಬ್ರಿಯಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಾವು ಜನರು ಅರಣ್ಯ ಮತ್ತು ಪ್ರಾಣಿಸ್ನೇಹಿಗಳಾಗಿ ಕೆಲಸ ಮಾಡಿ ಅಭಿವೃದ್ದಿಗೆ ಕೈಜೋಡಿಸಬೇಕಿದೆ. ಕಾನೂನಿನ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿಪಡಿಸಬಾರದು. ಡೀಮ್ಡ್ ಫಾರೆಸ್ಟ್ ಸಮಸ್ಯೆ ವಿಶೇಷ ಮುತುವರ್ಜಿ ವಹಿಸಿ ನಿವಾರಿಸಲಾಗುತ್ತದೆ. ಹೆಬ್ರಿ ಮುನಿಯಾಲು ವಿಶೇಷ ವಿದ್ಯುತ್ ಲೈನ್‌ಗೆ ಇರುವ ಅರಣ್ಯ ಇಲಾಖೆಯ ತೊಡಕು ನಿವಾರಣೆಗೆ ಸೂಚನೆ ನೀಡಿದರು.
ಹೆಬ್ರಿ ಶೃಂಗೇರಿಯಲ್ಲಿ ಹಿಂದೆ ನಿತ್ಯವೂ ನಕ್ಸಲರ ಕಾಟವಿತ್ತು. ಶಾಸಕ ಸುನಿಲ್ ಕುಮಾರ್ ಶಾಸಕರಾದ ಬಳಿಕ ಅವರ ಕಾರ್ಯವೈಖರಿ ಕಂಡು ನಕ್ಸಲರು ಪಲಾಯನ ಮಾಡಿದ್ದಾರೆ ಎಂದು ಸಚಿವ ಅರವಿಂದ ಲಿಂಬಾವಳಿ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಹೆಬ್ರಿ – ಕಾರ್ಕಳ ತಾಲ್ಲೂಕನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ. ಹೆಬ್ರಿ ಉದ್ಯಾನ ಹೆಬ್ರಿಯ ಆಸ್ತಿ ಎಂದು ನಿರ್ವಹಿಸಿ ಉಳಿಸಬೇಕಿದೆ ಎಂದರು.
ಕುಂದಾಪುರ ಡಿಎಫ್‌ಒ ಆಶೀಷ್ ರೆಡ್ಡಿ ಮಾತನಾಡಿ, 10 ವರ್ಷದ ಹಿಂದೆ ಪಾರ್ಕ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಎರಡು ವರ್ಷದ ಹಿಂದೆ ಕಾರ್ಯಪೂರ್ಣಗೊಂಡಿತ್ತು. ಎರಡು ವರ್ಷದ ಹಿಂದೆಯೇ ಪಾರ್ಕ್‌ಅನ್ನು ಜನೋಪಯೋಗಕ್ಕೆ ಮುಕ್ತವಾಗಿತ್ತು. ಇದೀಗ ಅಧಿಕೃತವಾಗಿ ಉದ್ಘಾಟನೆಯಾಗಿದೆ ಎಂದರು.
ಪಾರ್ಕಿನ ಸಾಕ್ಷಾಚಿತ್ರ ನಿರ್ಮಿಸಿದ ಛಾಯಗ್ರಾಹಕ ಮೂಡಬಿದಿರೆ ರವಿ ಕೋಟ್ಯಾನ್ ಅವರನ್ನು ಸಚಿವ ಅರವಿಂದ ಲಿಂಬಾವಳಿ ಗೌರವಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲತಿ, ನಾಡ್ಪಾಲಿನ ದಿನೇಶ ಹೆಗ್ಡೆ, ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಮಿಲ್ಲೋ ಟ್ಯಾಗೋ, ಪ್ರಕಾಶ್ ನೆಟಾಲ್ಕರ್, ರುಥ್ರೇನ್, ಡಾ.ಪ್ರಶಾಂತ್ ಪಿಕೆಎಂ, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ವಿವಿಧ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಇದ್ದರು.
ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ನಿರೂಪಿಸಿ ಆರ್‌ಎಫ್‌ಒ ದಿನೇಶ್ ಕುಮಾರ್ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.