ಭಾನುವಾರ, ಆಗಸ್ಟ್ 1, 2021
26 °C
ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸಮಾಲೋಚನಾ ಸಭೆ

ಉಡುಪಿ: ಮಾರ್ಗಸೂಚಿ ಬಳಿಕ ಮಸೀದಿ ಪುನಾರಂಭ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜೂನ್‌ 8ರಂದು ಮಸೀದಿಗಳನ್ನು ಆರಂಭಿಸದೆ ಸರ್ಕಾರ ಮಸೀದಿಗಳ ಆರಂಭಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬಳಿಕ ಸಭೆ ಕರೆದು ಮಸೀದಿ ಆರಂಭ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾ ಮುಸ್ಲಿಂ ಒಕ್ಕೂಟ ನಿರ್ಧರಿಸಿದೆ.

ಮಸೀದಿಗಳನ್ನು ಪುನಾರಂಭ ಕುರಿತು ಶನಿವಾರ ನೇಜಾರು ಜಾಮಿಯಾ ಮಸೀದಿಯಲ್ಲಿ ನಡೆದ ಸಮುದಾಯಿಕ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. 

ಸಭೆಯಲ್ಲಿ ವಿಷಯ ಮಂಡಿಸಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಯಾಸೀನ್ ಮಲ್ಪೆ, ಕೊರೊನಾ ಸೋಂಕು ಹರಡುವ ವಿಚಾರದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಆರೋಪಗಳು, ಅವಮಾನಗಳು ಬಂದರೂ ಸಮುದಾಯ ಜಾತಿ ಮತ ಬೇಶವಿಲ್ಲದೆ ಸಮಾಜದ ನೆರವಿಗೆ ನಿಂತಿದ್ದು ಶ್ಲಾಘನೀಯ ಎಂದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ 5,700 ಆಹಾರದ ಕಿಟ್‍ಗಳನ್ನು ವಿತರಿಸಿದೆ. ಹ್ಯುಮನಿಟೇರಿಯನ್ ರಿಲೀಫ್ ಸೊಸೈಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸುನ್ನೀ ಸ್ಟುಡೆಂಟ್ ಫೆಡರೇಶನ್, ತಬ್ಲೀಗ್ ಜಮಾತ್, ದಾವಾ ಸೆಂಟರ್, ಉಡುಪಿ ಜಾಮೀಯ ಮಸೀದಿ, ಶೀಶ್ ತಂಡ ಹಾಗೂ ಎಲ್ಲ ಮಸೀದಿಗಳು ಸಂಕಷ್ಟದಲ್ಲಿದ್ದ ಸರ್ವಧರ್ಮೀಯರಿಗೆ ಆಹಾರ ಸಾಮಾಗ್ರಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಮಸೀದಿಗಳಲ್ಲಿ ಆದಾಯವಿಲ್ಲ ಎಂಬ ಕಾರಣಕ್ಕೆ ಇಮಾಮ್, ಮುಅದ್ಸಿನ್, ಆಲಿಮ್‍ಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಇದು ಸರಿಯಲ್ಲ, ಹಲವು ವರ್ಷಗಳ ಕಾಲ ಮಸೀದಿಗಳಲ್ಲಿ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ತೆಗೆಯುವುದು ಸರಿಯಲ್ಲ. ಈ ಬಗ್ಗೆ ಎಲ್ಲ ಜಮಾತ್‍ನವರು ಯೋಚಿಸಬೇಕಿದೆ ಎಂದರು.

ಜೂ.8ರಿಂದ ಜಿಲ್ಲೆಯಲ್ಲಿ ಮಸೀದಿ ಆರಂಭಿಸುವ ಕುರಿತು ಪರ ಹಾಗೂ ವಿರೋಧ ಅಭಿಪ್ರಾಯಗಳು ಕೇಳಿಬಂದವು. ಮಸೀದಿಗಳ ಹೊಣೆಗಾರರಾದ ಎಂ.ಪಿ.ಮೊಯ್ದಿನಬ್ಬ, ಇಸ್ಮಾಯಿಲ್ ಆತ್ರಾಡಿ, ಖತೀಬ್ ರಶೀದ್, ಅಬ್ದುಲ್ ಗಫೂರ್ ಆದಿ ಉಡುಪಿ, ತಾಜುದ್ದೀನ್ ಉಪ್ಪಿನಕೋಟೆ, ಮುಹಮ್ಮದ್ ಶೀಶ್, ಸುಬಾನ್ ಹೊನ್ನಾಳ, ಇದ್ರೀಸ್ ಹೂಡೆ, ಮುಹಮ್ಮದ್ ಫೈಝಲ್, ಹುಸೇನ್ ಕೋಡಿಬೆಂಗ್ರೆ ಅಭಿಪ್ರಾಯ ಮಂಡಿಸಿದರು.

ಪ್ರತಿ ಬಾರಿ ತಬ್ಲೀಗ್‌ಗಳ ವಿರುದ್ಧ ದ್ವೇಷದ ಹೇಳಿಕೆ ನೀಡುವ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಬಾ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸಿ, ರಾಜೀನಾಮೆಗೆ ಒತ್ತಾಯಿಸಿ ದೂರು ದಾಖಲಿಸಲು ಒತ್ತಾಯಿಸಲಾಯಿತು.

ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಅರ್ಶದ್ ಅಹ್ಮದ್, ಮೂಳೂರು ಜುಮಾ ಮಸೀದಿ ಅಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್, ಎಸ್.ಪಿ.ಉಮರ್‌ ಫಾರೂಕ್, ಅಶ್ಫಕ್ ಅಹ್ಮದ್ ಕಾರ್ಕಳ, ಪಿಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ನಝೀರ್ ಅಂಬಾಗಿಲು, ಇಂದ್ರಾಳಿ ನೂರಾನಿ ಮಸೀದಿ ಅಧ್ಯಕ್ಷ ಶಬ್ಬೀರ್ ಅಹ್ಮದ್, ಇಕ್ಬಾಲ್ ಮನ್ನಾ, ಮುಹಮ್ಮದ್ ಗೌಸ್, ಹಸನ್ ಬೈಂದೂರು, ಇಬ್ರಾಹಿಂ ಕೋಟ, ಟಿ.ಎಂ. ಜಫರುಲ್ಲಾ ಹೂಡೆ, ರಫೀಕ್ ಕುಂದಾಪುರ, ಮುನಾಫ್ ಕಂಡ್ಲೂರು, ಶಾಬಾನ್ ಹಂಗ್ಲೂರು ಉಪಸ್ಥಿತರಿದ್ದರು.

ಅಬ್ದುರ್‌ ರೆಹಮಾನ್‌ ರಝ್ವಿ ಕಲ್ಕತ್ತ ಸ್ವಾಗತಿಸಿದರು. ಕೋಶಾಧಿಕಾರಿ ಇಕ್ಬಾಲ್ ಎಸ್. ಕಟಪಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಯಿತು ಎಂದು ಸಂಘಟನೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು