ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಿಕ್ಕಿದ್ದು ಕ್ಷಾತ್ರಶಕ್ತಿಯಿಂದ, ಅಹಿಂಸೆಯಿಂದಲ್ಲ: ಪ್ರತಾಪ ಸಿಂಹ

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ
Last Updated 28 ಮೇ 2022, 14:10 IST
ಅಕ್ಷರ ಗಾತ್ರ

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕ್ಷಾತ್ರ ಶಕ್ತಿಯಿಂದ; ಅಹಿಂಸೆಯಿಂದಲ್ಲ ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

1857ರ ಸಿಪಾಯಿ ದಂಗೆ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಕ್ರಾಂತಿಯಿಂದ. ಭಾರತದ ಇತಿಹಾಸವನ್ನು ಹೇಳುವಾಗ ಮೊಗಲರ ಆಳ್ವಿಕೆ ಬಗ್ಗೆ ಮಾತ್ರ ಉಲ್ಲೇಖಿಸಲಾಗುತ್ತಿದೆ. ಮೊಗಲರ ಆಳ್ವಿಕೆಗೂ ಮುನ್ನ ದೇಶವನ್ನು ಆಳಿದ ರಾಜರು ದೇಶದಲ್ಲಿದ್ದರು. ಮಾತ್ರವಲ್ಲ ಸಾಗರದಾಚೆಗೂ ಸಾಮ್ರಾಜ್ಯ ವಿಸ್ತರಿಸಿದ್ದರು ಎಂದರು.

ನಮ್ಮ ಮಕ್ಕಳಿಗೆ ದೇಶದ ನೈಜ ಇತಿಹಾಸ ತಿಳಿಸಬೇಕು. ಸ್ವಾತಂತ್ರ್ಯ ಹೋರಾಟ ಸಾಗಿಬಂದ ಹಾದಿ ಮತ್ತು ಹೋರಾಟಗಾರರ ಪರಿಚಯ ಯುವಜನತೆಗೆ ಸಿಗಬೇಕು. ಹಾಗಾಗಿ, ‘ಅಮೃತ ಭಾರತಿಗೆ ಕನ್ನಡದಾರತಿ‘ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ತಿಳಿಯುವುದರ ಜತೆಗೆ ದೇಶ ಪ್ರೇಮ ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಂಡಲು ಶ್ರಮಿಸಿದ ಮಹಾನ್ ನಾಯಕರಾದ ಜಾನ್ಸಿ ರಾಣಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಾಲಾ ಗಂಗಾಧರ ತಿಲಕ, ಸುಭಾಶ್‌ ಚಂದ್ರ ಬೋಸ್ ಅವರಂತಹ ಹೋರಾಟಗಾರರನ್ನು ಸ್ಮರಿಸಬೇಕು ಎಂದರು.

1857ರ ಮೊದಲ ಸಿಪಾಯಿ ದಂಗೆಯ ಬಗ್ಗೆ ವೀರ ಸಾವರ್ಕರ್ ಪುಸ್ತಕ ಬರೆದು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ಪ್ರತಿಯಾಗಿ ಬ್ರಿಟಿಷರು ಅವರನ್ನು ಅಂಡಮಾನ್, ನಿಕೋಬಾರ್ ಜೈಲಿಗೆ ಹಾಕಿದರು ಎಂದು ಸ್ಮರಿಸಿದರು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಬಲಿದಾನ ಮಾಡಿದ ನಾಯಕರ ಸ್ಮರಣೆ ಎಲ್ಲರ ಕರ್ತವ್ಯ. ಸರ್ಕಾರದ ಮೂಲಸೌಕರ್ಯಗಳು ಹಾಗೂ ಸವಲತ್ತುಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ತಲುಪಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕು ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ವರಲ್ಲೂ ದೇಶಾಭಿಮಾನ ಮೂಡಿಸುವಂತಹ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿಯ ಜನತೆ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಅಜ್ಜರಕಾಡಿಗೆ 1934ರ ಫೆ.25ರಂದು ಮಹಾತ್ಮ ಗಾಂಧೀಜಿ ಭೇಟಿ ನೀಡಿ ಭಾಷಣ ಮಾಡಿದ್ದರು. ಈ ಸಂದರ್ಭ ಇಲ್ಲಿನ ಭಾರತಿ ಬಾಯಿ ಆಭರಣವನ್ನು ಹೋರಾಟಕ್ಕೆ ದೇಣಿಗೆ ನೀಡಿದ್ದರು. ಡಾ. ನಾಯಕ್ ಬಂಗಾರವನ್ನು ನಿಧಿಗೆ ನೀಡಿ ಜೀವನ ಪರ್ಯಂತ ನಿರಾಭರಣರಾಗಿದ್ದರು ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿ ಕೂರ್ಮರಾವ್ ಸಂಕಲ್ಪ ವಿಧಿ ಬೋಧಿಸಿದರು. ಯಶವಂತ್ ರಾಜ್ ಬನ್ನಂಜೆ ಹಾಗೂ ತಂಡದಿಂದ ದೇಶಭಕ್ತಿ ಗಾಯನ, ಪವನ್ ಆಚಾರ್ ಮತ್ತು ತಂಡದಿಂದ ಪಂಚವೀಣೆಯಲ್ಲಿ ದೇಶಭಕ್ತಿ ನುಡಿಸುವಿಕೆ, ಸ್ವಾತಂತ್ರ್ಯ ಹೋರಾಟ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮರಾವ್, ಎಸ್‌ಪಿ ಎನ್. ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ಶಿಕ್ಷಣ ಇಲಾಖೆ ಅಧಿಕಾರಿ ಅಶೋಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT