ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಮ್ಲು ಕ್ಷೇತ್ರ ಬೊಬ್ಬರ್ಯ ಸಾನ್ನಿಧ್ಯ

ಸೀತಾನದಿ ತಟದಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರ
Last Updated 3 ಡಿಸೆಂಬರ್ 2022, 13:41 IST
ಅಕ್ಷರ ಗಾತ್ರ

ಹೆಬ್ರಿ : ಹಲವು ವರ್ಷಗಳ ಹಿಂದೆ ಪಾಳು ಬಿದ್ದ ಇತಿಹಾಸ ಪ್ರಸಿದ್ಧ ಸೀತಾನದಿ ತಟದಲ್ಲಿ ದಟ್ಟಾರಣ್ಯದ ನಡುವಿನ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಜೋಮ್ಲು ಕ್ಷೇತ್ರ ಬೊಬ್ಬರ್ಯ ಸಾನಿಧ್ಯ ಇದೀಗ ಎಲ್ಲರ ಸಹಕಾರದಲ್ಲಿ ಜೀರ್ಣೋದ್ಧಾರಗೊಂಡು ಭಕ್ತರ ಪಾಲಿನ ಶಕ್ತಿ ಸಾನಿಧ್ಯವಾಗಿ ಪ್ರಸಿದ್ಧಿ ಪಡೆದಿದೆ.

ಶ್ರೀ ಜೋಮ್ಲು ಕ್ಷೇತ್ರ ಪುರಾಣ:

ತ್ರೇತಾಯುಗದಲ್ಲಿ ರಾಮನ ಮಡದಿ ಸೀತೆಯ ಕಣ್ಣೀರಿನಿಂದ ಸೀತಾ ನದಿ ಹುಟ್ಟಿತು. ರಾಮನ ಶಕ್ತಿಯಿಂದ ಕಾಶಿ ರಾಮೇಶ್ವರದ ತೀರ್ಥಕ್ಕೆ ಸಮನಾಗಿ ಸೀತಾನದಿಯೂ ಪವಿತ್ರವಾಗಿದ್ದು ಶಕ್ತಿ ಹೊಂದಿದೆ ಎಂಬ ಪ್ರತೀತಿ ಇದೆ.

ಸೀತಾನದಿಯ ತಟದಲ್ಲಿ ಬೇಟೆಯಾಡಲು ಬಂದ ಶೌಭರನು ನದಿಯ ತಟದಲ್ಲಿ ಮಲಗಿರುವಾಗ ಆತನ ಕನಸಿನಲ್ಲಿ ಮಹಿಷಮರ್ಧಿನಿ ದಿವ್ಯ ದರ್ಶನ ನೀಡಿ ಅಲ್ಲೇ ತಪಸ್ಸು ಮಾಡಿ ಪುಣ್ಯ ಕ್ಷೇತ್ರ ನಿರ್ಮಾಣಕ್ಕೆ ಅಭಯ ನೀಡುತ್ತಾಳೆ.

ಶೌಭರನ ರಕ್ಷಣೆಗೆ ಬೊಬ್ಬರ್ಯ ದೈವವನ್ನು ನೇಮಿಸುತ್ತಾಳೆ. ತಪ್ಪಸ್ಸಿನಲ್ಲಿರುವ ಶೌಭರನಿಗೆ ಉಮ್ಮಲ್ತಿ ತೊಂದರೆ ಕೊಟ್ಟಾಗ ಬೊಬ್ಬರ್ಯ ದೈವ ರಕ್ಷಣೆ ನೀಡುತ್ತದೆ. ಬಳಿಕ ಪುಣ್ಯ ಎಳ್ಳಾಮಾವಾಸ್ಯೆಯ ದಿನ ಶೌಭರನಿಂದ ಪ್ರತಿಷ್ಠಿತವಾದ ಬೊಬ್ಬರ್ಯ ದೇವರು ನೆಲೆಯಾಗಿ ನಿಂತು ತೀರ್ಥಕ್ಷೇತ್ರವಾಗುತ್ತದೆ ಎಂಬುದು ಕ್ಷೇತ್ರ ಐತಿಹ್ಯ.

ಎಳ್ಳಾಮಾವಾಸ್ಯೆಯ ಪರ್ವಕಾಲದ ದಿನ ಪವಿತ್ರ ಸೀತಾನದಿಯಲ್ಲಿ ತೀರ್ಥ ಉದ್ಭವವಾಗುತ್ತದೆ. ಅಂದು ಸೀತಾನದಿಯಲ್ಲಿ ಸ್ನಾನ ಮಾಡಿದರೆ ಪಾಪಕರ್ಮಗಳು, ರೋಗ ರುಜಿನಗಳು ದೂರವಾಗಿ ಕಾಶಿ ಕ್ಷೇತ್ರದ ಯಾತ್ರೆ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬುದು ನಂಬಿಕೆ.

ಇದೇ ಸ್ಥಳದಲ್ಲಿ ಜೋಮೇರು ಋಷಿಗಳು ದೀರ್ಘಕಾಲ ತಪಸ್ಸು ಮಾಡಿದ್ದರಿಂದ ಈ ಪ್ರದೇಶ ಜೋಮ್ಲು ತೀರ್ಥ ಎಂಬ ಹೆಸರು ಬಂತು. ಬಾರ್ಕೂರು ಮತ್ತು ಸೂರಾಲು ರಾಜ ವಂಶಸ್ಥರು ಜೋಮ್ಲು ಕ್ಷೇತ್ರದಲ್ಲಿ ಅನ್ನದಾನ ಮಾಡುತ್ತಿದ್ದರು.

ಕ್ಷೇತ್ರದ ಅಭಿವೃದ್ಧಿ:

ಪಾಳು ಬಿದ್ದ ಜೋಮ್ಲು ಬೊಬ್ಬರ್ಯ ಸಾನಿಧ್ಯವನ್ನು ಸ್ಥಳೀಯ ವಿವೇಕಾನಂದ ಯುವ ವೇದಿಕೆ ಚಾರ ಹಾಗೂ ಶ್ರಿ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಕ್ಷೇತ್ರ ಅಭಿವೃದ್ಧಿ ಸಮಿತಿಯನ್ನು ರಚಿಸಿ ಜೀರ್ಣೋದ್ಧಾರ ಮಾಡಲಾಗಿದೆ.

ಪ್ರತಿ ವರ್ಷ ನಡೆಯುವ ಎಳ್ಳಮಾವಾಸ್ಯೆಗೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯ ತೀರ್ಥಸ್ನಾನ ಮಾಡುತ್ತಾರೆ. ಹಿಂದೆ ನಿಂತು ಹೋಗಿದ್ದ ಅನ್ನಸಂತರ್ಪಣೆಯನ್ನು ಭಕ್ತರ ಸಹಕಾರದಿಂದ ಮತ್ತೆ ಆರಂಭಿಸಲಾಗಿದೆ ಎನ್ನುತ್ತಾರೆ ಬಾವಿಗದ್ದೆ ಮಿಥುನ್‌ ಶೆಟ್ಟಿ.

ಚಾರ ಗ್ರಾಮಸ್ಥರು ಮತ್ತು ಪರಿಸರದ ಆರಾಧ್ಯ ದೈವವಾಗಿ ಜಾನುವಾರುಗಳಿಗೆ, ಕೃಷಿಕರಿಗೆ, ಅನಾರೋಗ್ಯ ಪೀಡಿತರಿಗೆ ದೈವದ ರಕ್ಷಣೆ ಇದೆ. ನಂಬಿದ ಭಕ್ತರು ಹರಕೆ ರೂಪದಲ್ಲಿ ವಿಶೇಷ ಮತ್ತು ಅಪರೂಪದ ಕಡಬು ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಹಾಲಿಟ್ಟು ಸೇವೆ, ಅನ್ನದಾನ ಸೇವೆ ಇಲ್ಲಿನ ವಿಶೇಷತೆ.

ನಂಬಿದವರಿಗೆ ಇಂಬು ಕೊಡುವ ಶ್ರೀ ಬೊಬ್ಬರ್ಯ ದೇವರ ಸನ್ನಿಧಿಗೆ 5 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನ ಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಬೊಬ್ಬರ್ಯ ಸಾನ್ನಿಧ್ಯಕ್ಕೆ ಹಾಸನ ಅರೆಮಾದನಹಳ್ಳಿಯ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ, ಉಡುಪಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ, ಬಾಳಕುದ್ರು ಮಠದ ನರಸಿಂಹಶ್ರಮ ಸ್ವಾಮೀಜಿ ಬಂದು ಭಕ್ತರನ್ನು ಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT