ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1000 ಗುಂಡಿ ನಿರ್ಮಾಣ ಗುರಿ

ಉಡುಪಿ: ಬಚ್ಚಲುಗುಂಡಿ ನಿರ್ಮಾಣಕ್ಕೂ ‘ಖಾತ್ರಿ’ ಅನುದಾನ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಮನೆಗೂ ‘ಬಚ್ಚಲು ಗುಂಡಿ’ (ಸೋಕ್‌ಪಿಟ್‌) ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದ ಬಚ್ಚಲಿನ ವ್ಯರ್ಥ ನೀರು ಭೂಮಿಗೆ ಇಂಗಬೇಕು, ಸಾಂಕ್ರಮಿಕ ರೋಗಗಳ ಹರಡುವಿಕೆ ತಡೆಯಬೇಕು ಎಂಬುದು ಯೋಜನೆ ಹಿಂದಿರುವ ಉದ್ದೇಶ.

ಹಳ್ಳಿಗಳಲ್ಲಿ ಬಹುತೇಕ ಕಡೆ ಸಮರ್ಪಕ ಒಳಚರಂಡಿ ವ್ಯವಸ್ಥೆಯಿಲ್ಲದೆ ಸ್ನಾನ ಮಾಡಿದ, ಪಾತ್ರೆ ಹಾಗೂ ಬಟ್ಟೆ ತೊಳೆದ ನೀರು ಮನೆಯ ಮುಂದಿನ ರಸ್ತೆಗೊ, ಹಿತ್ತಲಿಗೊ, ತಗ್ಗು ಪ್ರದೇಶಕ್ಕೊ ಹರಿದು ಹೋಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ಅಸಹನೀಯವಾಗುತ್ತಿತ್ತು. ಜತೆಗೆ, ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಮಿಕ ರೋಗಗಳ ಸೃಷ್ಟಿಗೂ ಕಾರಣವಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲು ಸರ್ಕಾರ ಬಚ್ಚಲುಗುಂಡಿಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ.

ಯಾರು ಅರ್ಹರು: ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ ಕಾರ್ಡ್‌ ಹೊಂದಿರಬೇಕು. ಬಿಪಿಎಲ್‌ ಕಾರ್ಡ್‌ದಾರರು, ಎಸ್‌ಸಿ, ಎಸ್‌ಟಿ, ಅಲೆಮಾರಿಗಳು, ಸ್ತ್ರೀಪ್ರಧಾನ ಕುಟುಂಬಗಳು (ಎಪಿಎಲ್‌), ಅಂಗವಿಕಲರು, ಭೂ ಸುಧಾರಣಾ ಹಾಗೂ ಇಂದಿರಾ ಆವಾಸ್‌ ಯೋಜನೆ ಫಲಾನುಭವಿಗಳು, ಸಣ್ಣ ಹಾಗೂ ಅತಿ ಸಣ್ಣ ರೈತರು, ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳು ಯೋಜನೆಯ ಲಾಭ ಪಡೆಯಬಹುದು.

ದಾಖಲೆಗಳು ಏನೇನು ಬೇಕು: ಜಾಬ್ ಕಾರ್ಡ್‌ ಪ್ರತಿ ಹಾಗೂ ಮನೆಯ ಆರ್‌ಟಿಸಿ ಪ್ರತಿಯನ್ನು ಸಂಬಂಧಪಟ್ಟ ಪಂಚಾಯಿತಿಗೆ ಸಲ್ಲಿಸಬೇಕು. ಕಾಮಗಾರಿಗೆ ತಗುಲಿದ ಖರ್ಚಿನ ವಿವರ ಹಾಗೂ ಒರಿಜಿನಲ್‌ ಬಿಲ್‌ ಸಲ್ಲಿಸಿದರೆ, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಬಚ್ಚಲುಗುಂಡಿ ನಿರ್ಮಾಣಕ್ಕೆ ಗರಿಷ್ಠ ₹14,000ರವರೆಗೆ ಅನುದಾನ ಪಡೆಯಬಹುದು.

ಆಯಾ ಗ್ರಾಮ ಪಂಚಾಯಿತಿಯ ಪಿಡಿಒಗಳಿಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ. ಫಲಾನುಭವಿಗಳು ಪಂಚಾಯಿತಿ ಕಚೇರಿಗೆ ಭೇಟಿನೀಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿದ ಎಲ್ಲ ಅರ್ಹರಿಗೂ ಬಚ್ಚಲುಗುಂಡಿ ನಿರ್ಮಾಣಕ್ಕೆ ಅನುಮತಿ ಸಿಗಲಿದೆ ಎನ್ನುತ್ತಾರೆ ಅಧಿಕಾರಿ ಶ್ಯಾಂ.

ಗುಂಡಿ ನಿರ್ಮಾಣ ಹೇಗೆ: ಮನೆಯ ಪಕ್ಕದ ಖಾಲಿ ಜಾಗದಲ್ಲಿ 6 ಅಡಿ ಉದ್ದ, 4 ಅಡಿ ಅಗಲದಲ್ಲಿ ಗುಂಡಿ ನಿರ್ಮಿಸಿಕೊಳ್ಳಬೇಕು. ನೀರು ಇಂಗಲು ಅನುಕೂಲವಾಗುವಂತೆ ಅಡಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಬೇಕು. ಕಾಮಗಾರಿಗೆ ಸಿಮೆಂಟ್ ರಿಂಗ್ ಅಥವಾ ಸ್ಥಳೀಯವಾಗಿ ಸಿಗುವ ಕೆಂಪುಕಲ್ಲುಗಳನ್ನು ಬಳಸಬಹುದು. ಬಚ್ಚಲುಮನೆಯಿಂದ ವ್ಯರ್ಥವಾಗಿ ಹರಿಯುವ ನೀರನ್ನು ಪ್ಲಾಸ್ಟಿಕ್‌ ಪೈಪ್‌ನ ಮೂಲಕ ಗುಂಡಿಗೆ ಬಂದು ಬೀಳುವಂತೆ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಮೂಲಕ್ಕೆ ದೂರವಾಗಿ ಬಚ್ಚಲುಗಂಡಿಗಳಿದ್ದರೆ ಉತ್ತಮ.

‘ಕಾಮಗಾರಿಗೆ ವೇಗ’

ಬಚ್ಚಲುಗುಂಡಿಗಳ ನಿರ್ಮಾಣಕ್ಕಾಗಿ ನರೇಗಾ ಅಡಿಯಲ್ಲಿ 1,048 ಅರ್ಜಿಗಳು ಬಂದಿದ್ದು, ವರ್ಕ್‌ ಎಂಟ್ರಿಯಾಗಿದೆ. ಮಳೆಗಾಲವಾಗಿದ್ದರಿಂದ ಕಳೆದ ತಿಂಗಳು ಕಾಮಗಾರಿ ವಿಳಂಬವಾಗಿತ್ತು. ಈಗ ವೇಗವಾಗಿ ಸಾಗಿದ್ದು, ಈಗಾಗಲೇ 76 ಕಾಮಗಾರಿಗಳು ಆರಂಭವಾಗಿವೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 50 ಬಚ್ಚಲುಗುಂಡಿಗಳ ನಿರ್ಮಾಣಕ್ಕೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು