ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌ಉಡುಪಿ | ಸ್ಥಳೀಯರಿಗೆ ಹೆದ್ದಾರಿ ಸುಂಕ ವಿನಾಯಿತಿ ನೀಡಿ: ಜಿಲ್ಲಾಧಿಕಾರಿ ಸೂಚನೆ

ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 5 ಜುಲೈ 2024, 4:12 IST
Last Updated 5 ಜುಲೈ 2024, 4:12 IST
ಅಕ್ಷರ ಗಾತ್ರ

ಉಡುಪಿ: ಹೆದ್ದಾರಿ ಸುಂಕ ವಸೂಲಾತಿ ಕೇಂದ್ರಗಳಲ್ಲಿ ಸ್ಥಳೀಯರಿಗೆ ಈ ಹಿಂದೆ ನೀಡಿದ್ದ ರೀತಿಯಲ್ಲೇ ಸುಂಕ ವಿನಾಯಿತಿ ನೀಡಬೇಕು. ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ದೂರುಗಳ ಕುರಿತು ಚರ್ಚಿಸುವ ಸಲುವಾಗಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು ಇಳಿಕೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ, ಸಾಸ್ತಾನ ಹಾಗೂ ಶಿರೂರಿನ ಟೋಲ್‌ಗಳ ಸಮೀಪ ಪ್ರದೇಶಗಳಲ್ಲಿ ವಾಸವಿರುವ ಸ್ಥಳೀಯರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ದಿನದಲ್ಲಿ ಐದಾರು ಬಾರಿ ಟೋಲ್‌ನಲ್ಲಿ ಹಾದುಹೋಗುವಾಗ ಪ್ರತಿಬಾರಿಯೂ ಶುಲ್ಕ ಪಾವತಿ ಮಾಡಲು ಅನಾನುಕೂಲತೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಸ್ಥಳೀಯರ ವಾಹನಗಳಿಗೆ ವಿನಾಯಿತಿ ಕಲ್ಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆಯ ಅವೈಜ್ಞಾನಿಕ ಕಾಮಗಾರಿಗಳಿಂದ ಸಮಸ್ಯೆ ಉಂಟಾಗುತ್ತಿದೆ. ಅಪಘಾತಗಳನ್ನು ನಿಯಂತ್ರಿಸಲು ಅಗತ್ಯವಿರುವ ಕಡೆ ಸರ್ವಿಸ್ ರಸ್ತೆ, ರಸ್ತೆ ರಿಫ್ಲೆಕ್ಟರ್‌, ದಾರಿದೀಪ ಅಳವಡಿಸುವುದು, ರಸ್ತೆಯ ಹೊಂಡಗಳನ್ನು ಮುಚ್ಚುವುದು, ಜಂಕ್ಷನ್‌ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಕೆಲವು ಟೋಲ್‌ಗಳ ಸಮೀಪದಲ್ಲಿ ಹೋಟೆಲ್‌ಗಳು ಮತ್ತು ಅಂಗಡಿಗಳು ಇರುವುದರಿಂದ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತಗಳು ಉಂಟಾಗುವ ಸಾಧ್ಯತೆ ಇದೆ. ಇವುಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಟೋಲ್ ಸಮೀಪ ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ಜಂಕ್ಷನ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವಂತೆ ತಿಳಿಸಿದರು.

ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಕೆಲವು ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲು ಅನುಮತಿ ದೊರಕಿದ್ದು, ಇವುಗಳ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಅವಶ್ಯವಿರುವ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಮಾತನಾಡಿ, ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಕೆಲವು ಅಪಘಾತದಲ್ಲಿ ಸಾಮಾನ್ಯ ಗಾಯ, ತೀವ್ರತರದ ಗಾಯಗಳಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ, ಉಡುಪಿ ತಹಶೀಲ್ದಾರ್ ಹರೀಶ್ ಹಾಗೂ ಕಾಪು ತಹಶೀಲ್ದಾರ್ ಪ್ರತಿಭಾ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಟೋಲ್ ಸಮೀಪ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ ‘ಜಂಕ್ಷನ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ’ ‘ಅಪಘಾತ ಪ್ರಕರಣ ಇಳಿಕೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT