ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೊಸ ಕಾನೂನುಗಳು ದೇಶಕ್ಕೆ ಹಿತಕರವಲ್ಲ’

ವಿಚಾರ ಸಂಕಿರಣದಲ್ಲಿ ವಕೀಲ ಶಾಂತಾರಾಮ್ ಶೆಟ್ಟಿ ಪ್ರತಿಪಾದನೆ
Published 29 ಜೂನ್ 2024, 6:22 IST
Last Updated 29 ಜೂನ್ 2024, 6:22 IST
ಅಕ್ಷರ ಗಾತ್ರ

ಉಡುಪಿ: ‘ಐಪಿಸಿ, ಸಿ.ಆರ್.ಪಿ.ಸಿ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್‌ಗೆ ಬದಲಾಗಿ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆಯು ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಹಿತಕರವಲ್ಲ’ ಎಂದು ವಕೀಲ ಎಂ. ಶಾಂತಾರಾಮ ಶೆಟ್ಟಿ ಪ್ರತಿಪಾದಿಸಿದರು.

ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹೊಸ ಕಾನೂನುಗಳು ಜಾರಿಯಾದ ಬಳಿಕ ದೇಶದಲ್ಲಿ ಮೂರು ‌‘ಪಿ’ ಗಳು ಆಡಳಿತ ನಡೆಸಲಿದ್ದಾರೆ. ಪೊಲೀಸ್, ಪವರ್‌ಫುಲ್ ಪರ್ಸನ್ ಮತ್ತು ಪೊಲಿಟಿಷಿಯನ್‌ಗಳ ದರ್ಬಾರಿನಲ್ಲಿ ಬದುಕಬೇಕಾಗುತ್ತದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಯಾವ ರೀತಿಯಲ್ಲೂ ನಾಗರಿಕರಿಗೆ ಸುರಕ್ಷತೆಯನ್ನು ನೀಡಿಲ್ಲ ಎಂದು ಹೇಳಿದರು.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಏಳು ವರ್ಷಕ್ಕಿಂತ ಕೆಳಗಿನ ಶಿಕ್ಷಾರ್ಹ ಅಪರಾಧ ಪ್ರಕರಣಗಳಲ್ಲಿ 14 ದಿನ ಪ್ರಾಥಮಿಕ ತನಿಖೆಯನ್ನು ನಡೆಸಿದ ಬಳಿಕ ಎಫ್.ಐ.ಆರ್ ದಾಖಲಿಸಲು ಅವಕಾಶ ನೀಡಲಾಗಿದೆ‌. ಇದರಿಂತ ಶೋಷಿತರಿಗೆ ನ್ಯಾಯ ದೊರಕುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದ ಸಂವಿಧಾನ ನೀಡಿದ ಮೂಲಭೂತ ಹಕ್ಕನ್ನು ಕಸಿದುಕೊಂಡು, ಸರ್ಕಾರಿ ಅಧಿಕಾರಿಗಳಿಗೆ ಹೊಸ ಕಾನೂನಿನಲ್ಲಿ ಉದಾರತೆಯನ್ನು ತೋರಿಸಿದ್ದಾರೆ. ಈ ರೀತಿಯ ಕಾನೂನುಗಳನ್ನು ಯಾಕೆ ಜಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಲಲಿತಾ ಕುಮಾರಿ ವರ್ಸಸ್‌ ಉತ್ತರ ಪ್ರದೇಶ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಅವರು, ಈ ತೀರ್ಪಿನಲ್ಲಿ ನ್ಯಾಯಪೀಠವು, ಒಂದು ವೇಳೆ ಎಫ್.ಐ.ಆರ್ ದಾಖಲಿಸುವ ಪ್ರಕ್ರಿಯೆಯನ್ನು ಪೊಲೀಸರ ವಿವೇಚನೆಗೆ ಬಿಟ್ಟಲ್ಲಿ ಅದು ಅರಾಜಕತೆಗೆ ನಾಂದಿ ಆಗಬಹುದು ಎಂದು ಹೇಳಲಾಗಿದೆ ಎಂದರು.

ಪೊಲೀಸರ ವರ್ತನೆಯಿಂದ ನೊಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಹಕ್ಕುಗಳನ್ನೂ ಕುಂಠಿತಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಬಿಸಿಎಲ್ ಕಾನೂನು ಮಹಾ ವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರಿ, ಯಾವುದೇ ಕಾನೂನು ಬಂದರೂ, ಅದರ ಬಗ್ಗೆ ಜನರಿಗೆ ಮತ್ತು ಸರ್ಕಾರಕ್ಕೆ ತಿಳಿಸಿಕೊಡುವ ಜವಾಬ್ದಾರಿಯನ್ನು ವಕೀಲರು ತೆಗೆದುಕೊಳ್ಳಬೇಕು. ಆದ್ದರಿಂದಾಗಿ ಅಂತಹ ಕಾನೂನುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವಾದ, ವಿವಾದ, ಸಂವಾದ ನಡೆಸಬೇಕು ಎಂದು ಹೇಳಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ರೂಪಶ್ರೀ ಪ್ರಾರ್ಥಿಸಿದರು. ಸಹನಾ ಕುಂದರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT